ಉಡುಪಿಯ ಕಕ್ಕುಂಜೆ ಚರ್ಚ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್. ಲೂವಿಸ್, ಡಾ. ಅಶೋಕ್ ಕಾಮತ್, ವಿನ್ಸೆಂಟ್ ಕ್ರಾಸ್ತಾ ಇದ್ದರು.
* ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್. ಲೂವಿಸ್ ಅಭಿಮತ
* ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿಯಿಂದ ಗುರುವಂದನೆ
ಉಡುಪಿ: ಶಿಕ್ಷಣವೆಂದರೆ ಕೇವಲ ಜ್ಞಾನ ಸಂಪಾದನೆಯಲ್ಲ. ಅದು ಮಾನವನ ಜೀವನದಲ್ಲಿ ದಯೆ, ಕರುಣೆ, ಮತ್ತು ಮಾನವೀಯ ಮೌಲ್ಯ ರೂಪಿಸುವ ಶಕ್ತಿ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮಾನವೀಯತೆ ರೂಪಿಸುವ ಸಮಾಜದ ಶಿಲ್ಪಿಗಳಾಗಿದ್ದಾರೆ. ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಅತ್ಯಂತ ಪವಿತ್ರವಾದ ವೃತ್ತಿಯಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫ್ರಾನ್ಸಿಸ್ ಎಫ್. ಲೂವಿಸ್ ಹೇಳಿದರು.
ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಕಥೊಲಿಕ್ ಶಿಕ್ಷಣ ಸೊಸೈಟಿ ವತಿಯಿಂದ ಶನಿವಾರ (ಸೆ.12) ಆಯೋಜಿಸಿದ್ದ ಧರ್ಮಪ್ರಾಂತ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಆತಂಕದ ಸಂದರ್ಭ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಮಾತನಾಡಿ, ಶಿಕ್ಷಕರು ತಮ್ಮ ಸೇವೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ಮೂಡಿಸುತ್ತಾರೆ. ಎಲ್ಲ ಸವಾಲು ಸ್ವೀಕರಿಸಿ ಮಕ್ಕಳಿಗೆ ಸಂಸ್ಕಾರ ನೀಡುತ್ತಾರೆ. ಇಂದಿನ ಮಕ್ಕಳು ಮೊಬೈಲ್ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳ ಲಭ್ಯತೆ ತರಗತಿಯ ಕೋಣೆಗೂ ತಲುಪಿರುವುದು ಆತಂಕದ ಸಂಗತಿ. ಇಂತಹ ಸಂಕೀರ್ಣ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಯ ಮೂಲಕ ಗೆದ್ದು ಸಮಾಜದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಕಥೊಲಿಕ್ ಎಜುಕೇಷನ್ ಸೊಸೈಟಿಯ ಶಿಕ್ಷಣ ಸಂಸ್ಥೆಗಳ ನಿವೃತ್ತ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಪ್ರಶಸ್ತಿ ವಿಜೇತ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅತ್ಯಧಿಕ ಫಲಿತಾಂಶ ಗಳಿಸಿದ ಶಿಕ್ಷಣ ಸಂಸ್ಥೆಗಳನ್ನು ಗೌರವಿಸಲಾಯಿತು. ಉಡುಪಿ ಜಿಲ್ಲೆಯ ಮೊದಲ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಸಾಧನೆ ಮಾಡಿದ ಕ್ಯಾಪ್ಟನ್ ಶೈನಿ ಆಸ್ಮಾ ಸಲ್ಡಾನಾ ಅವರನ್ನು ಸನ್ಮಾನಿಸಲಾಯಿತು.
ಕಥೊಲಿಕ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿದರು. ಮಿಲಾಗ್ರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ಕಲ್ಯಾಣಪುರದ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಅನಿತಾ ವಂದಿಸಿದರು. ಸುರೇಶ್ ಹೆಗ್ಡೆ ಮತ್ತು ಲೊಯ್ಲಿಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.