ತಾರಾಬಳಿಯಲ್ಲಿ ಅಪಾಯಕಾರಿ ಸೇತುವೆಯನ್ನು ತೆರವು ಮಾಡುತ್ತಿರುವುದು.  
ಉಡುಪಿ

ತಾರಬಳಿ ಶಿಥಿಲ ಸೇತುವೆ ತೆರವು

ಇಂದಿರಾ ಎನ್ ಕೆ
ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಂಟ್ವಾಳ ತಾಲೂಕಿನ ಹಲವು ಗ್ರಾಮಗಳನ್ನು ಸಂಪರ್ಕಿಸುವ ಬೆಳ್ಳೂರು ಗ್ರಾಮದ ಬಟ್ಟಾಜೆ ಬಳಿಯ ತಾರಬಳಿ ಸೇತುವೆ ಶಿಥಿಲಗೊಂಡಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತೆರವು ಮಾಡಲಾಗಿದೆ. ದೊಡ್ಡ ರಾಜಕಾಲುವೆಗೆ ನಿರ್ಮಿಸಲಾಗಿದ್ದ ಈ ಸೇತುವೆ ಹಲವು ಊರುಗಳಿಗೆ ಸಂಪರ್ಕ ಕೊಂಡಿಯಾಗಿತ್ತು. ಇದೀಗ ಊರಿನ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ಸುತ್ತಿ ಬಳಸಿ ಸಂಚರಿಸುವಂತಾಗಿದೆ.
ಬಡಗ ಬೆಳ್ಳೂರು ಗ್ರಾಮದ ಬಟ್ಟಾಜೆ ಎಂಬಲ್ಲಿನ ತಾರಬಳಿ ಸೇತುವೆ ಕಳೆದ ಕೆಲವು ತಿಂಗಳಿನಿಂದ ಮುರಿದು ಬೀಳುವ ಸ್ಥಿತಿಯಲ್ಲಿತ್ತು. ವಾಹನ ಸಂಚಾರ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಸಂಚಾರ ನಿಯಂತ್ರಣಕ್ಕಾಗಿ ಪಂಚಾಯಿತಿಯಿಂದ ರಸ್ತೆಯ ಎರಡೂ ಕಡೆಯಲ್ಲಿ ಕಲ್ಲಿನ ಗೋಡೆ ಕಟ್ಟಿ ಭಾರಿ ವಾಹನಗಳ ಸಂಚಾರ ನಿಯಂತ್ರಿಸಲಾಗಿತ್ತು. ಇತ್ತೀಚೆಗೆ ಈ ಸೇತುವೆ ಮತ್ತಷ್ಟು ಶಿಥಿಲಗೊಂಡು ಅಪಾಯಕಾರಿಯಾದ್ದರಿಂದ ಸೇತುವೆ ತೆರವು ಮಾಡುವಂತೆ ಜನರು ಆಗ್ರಹಿಸಿದ್ದರು. ಅದರಂತೆ ಇದೀಗ ಸೇತುವೆ ತೆರವು ಕಾರ್ಯ ಆರಂಭಿಸಲಾಗಿದೆ.
ಕಳಚಿದ ಸಂಪರ್ಕ ಕೊಂಡಿ: ಕಿರಳೆ, ಬಟ್ಟಾಜೆ, ಸೊರ್ನಾಡು, ಎರ್ಮಾಳ ಪದವು, ಕುರಿಯಾಳ, ಬಾಳಿಕೆ, ಬಂಡಸಾಲೆ ಸೇತುವೆಯ ಒಂದು ಕಡೆಯಾದರೆ, ಕೊಳತ್ತಮಜಲು, ಬಡಗಬೆಳ್ಳೂರು, ಪೊಳಲಿ ಸೇತುವೆಯ ಮತ್ತೊಂದು ಕಡೆ ಇವೆ. ಈ ಎರಡೂ ಕಡೆಯ ಗ್ರಾಮಗಳ ಸಂಪರ್ಕಕ್ಕೆ ತಾರಬಳಿ ಸೇತುವೆಯೇ ಕೊಂಡಿಯಾಗಿದ್ದು ಇದೀಗ ಗ್ರಾಮೀಣ ಜನರ ನಿತ್ಯ ಓಡಾಟಕ್ಕೆ ಸಮಸ್ಯೆಯಾಗಿದೆ.
ಸುತ್ತಿಬಳಸಿ ಸಂಚಾರಿ: ತಾರಬಳಿ ಸೇತುವೆ ತೆರವಾದ ಹಿನ್ನೆಲೆಯಲ್ಲಿ ವಾಹನದಲ್ಲಿ ಸಂಚರಿಸಬೇಕಿದ್ದರೆ ಮೂಲರಪಟ್ಣ, ವಾರಟ್ಟಿಲ್, ಬಡಗಬೆಳ್ಳೂರು ಆಗಿ ಬರಬೇಕು. ಇದು ಹೆಚ್ಚೂ ಕಡಿಮೆ 10-15 ಕಿ.ಮೀ. ದೂರವಾಗಲಿದೆ. ರಿಕ್ಷಾದಲ್ಲಿ 50 ರೂ.ಗೆ ಹೋಗಬೇಕಾದವರು ಬರೋಬ್ಬರಿ 170 ರೂ. ಕೊಟ್ಟು ಹೋಗುವಂತಾಗಿದೆ. ನಿತ್ಯ ಹಾಲಿನ ಡಿಪೋಗೆ ಹಾಲು ಕೊಂಡೊಯ್ಯುವವರು ಮುಂದೇನು ಎಂಬ ಆತಂಕ ಎದುರಿಸುತ್ತಿದ್ದಾರೆ. ಅನಾರೋಗ್ಯವಾದರೆ ತುರ್ತು ವಾಹನ ಸಂಚಾರವೂ ಇಲ್ಲಿ ಕಷ್ಟ. ಹೊಸ ಸೇತುವೆ ನಿರ್ಮಾಣಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ತಾತ್ಕಾಲಿಕ ಕಾಲುಸಂಕ ನಿರ್ಮಾಣ

ಹಳೇ ಸೇತುವೆ ತೆರವು ಕಾರ್ಯಾಚರಣೆ ವಾರದೊಳಗೆ ಪೂರ್ಣವಾಗಲಿದೆ. ಅದಾದ ಬಳಿಕ ತಾತ್ಕಾಲಿಕ ಕಾಲು ಸಂಕ ರಚನೆಯಾಗಲಿದೆ. 8 ಮೀ. ಉದ್ದ ಹಾಗೂ 6.50 ಮೀ. ಅಗಲದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಸದ್ಯ ಇರುವ ಸೇತುವೆಯ ಅಡಿಪಾಯವನ್ನು ಸಂಪೂರ್ಣ ತೆಗೆಯಬೇಕಾಗಿದ್ದು ಮಳೆ ಇರುವಾಗ ಇದನ್ನು ನಡೆಸುವುದು ಕಷ್ಟ. ಹೀಗಾಗಿ ಅದು ಪೂರ್ಣವಾದ ಬಳಿಕ ಮಳೆಗಾಲದ ನಂತರವೇ ಹೊಸ ಸೇತುವೆ ಕೆಲಸ ಆರಂಭವಾಗುವ ಸಾಧ್ಯತೆ ಇದೆ.

ಹಳೇ ಸೇತುವೆ ಅಪಾಯಕಾರಿ ಎಂಬ ಕಾರಣದಿಂದ ತೆರವು ಮಾಡಲಾಗುತ್ತಿದೆ. ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ 1 ಕೋಟಿ ರೂ. ಮೀಸಲಿಟ್ಟಿದ್ದು, ಟೆಂಡರ್ ಕೂಡ ಅಂತಿಮವಾಗಿದೆ. ಶೀಘ್ರದಲ್ಲಿ ಹೊಸ ಸೇತುವೆ ಕೆಲಸ ಆರಂಭಿಸಲಾಗುವುದು. ಸದ್ಯ ಜನರಿಗೆ ಅನುಕೂಲವಾಗಲು ಕಾಲ್ನಡಿಗೆ ಸಂಚಾರಕ್ಕೆ ಕಾಲುಸಂಕ ನಿರ್ಮಿಸಲಾಗುವುದು.

— ಜಗದೀಶ್ ಎನ್., ಸಹಾಯಕ ಇಂಜಿನಿಯರ್, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಬಂಟ್ವಾಳ