ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್
ಉಡುಪಿ: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಜೂನ್ 12ರಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.
ಮಧ್ಯಾಹ್ನ 12:30ಕ್ಕೆ ವಿಶೇಷ ವಿಮಾನದ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ದರ್ಶನ ಮುಗಿಸಿ ಮಧ್ಯಾಹ್ನ 3 ಗಂಟೆಗೆ ರಸ್ತೆ ಮಾರ್ಗವಾಗಿ ಮರಳಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಶೇಷ ವಿಮಾನದ ಮೂಲಕ ಚೆನ್ನೈಗೆ ವಾಪಸ್ ತೆರಳಲಿದ್ದಾರೆ.
ಸಿಎಂ ವಿಜಯ್ ‘Z+’ ವಲಯದ ಅತ್ಯುನ್ನತ ಭದ್ರತೆ ಹೊಂದಿದ್ದು, ಕರ್ನಾಟಕದಲ್ಲೂ ಅಪಾರ ಜನಬೆಂಬಲ ಹಾಗೂ ಅಭಿಮಾನಿ ಬಳಗ ಇರುವುದರಿಂದ, ಅವರು ಸಂಚರಿಸುವ ಮಾರ್ಗದ ಪ್ರಮುಖ ಜಂಕ್ಷನ್‌ಗಳಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಜಮಾಯಿಸುವ ಸಾಧ್ಯತೆಯಿದೆ. ಕೆಲವರು ಸಿಎಂ ಬೆಂಗಾವಲು ವಾಹನವನ್ನು ಹಿಂಬಾಲಿಸಲು ಯತ್ನಿಸುವ ಸಾಧ್ಯತೆ ಇರುವುದರಿಂದ, ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಭದ್ರತೆ ಕಾಪಾಡಲು ಅಗತ್ಯಕ್ರಮಕೈಗೊಳ್ಳುವಂತೆ ತಮಿಳುನಾಡು ಸಿಐಡಿ ಭದ್ರತಾ ವಿಭಾಗವು ಕರ್ನಾಟಕ ಪೊಲೀಸರಿಗೆ ಸಂದೇಶ ರವಾನಿಸಿದೆ. ವಿಶೇಷವಾಗಿ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ಕೊನೆಯ 30 ರಿಂದ 40 ಕಿಲೋಮೀಟರ್ ರಸ್ತೆ ಮಾರ್ಗ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ ಹಾಗೂ ಸೌಪರ್ಣಿಕಾ ನದಿ ಪಾತ್ರದ ದಟ್ಟ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶದ ಮೂಲಕ ಹಾದುಹೋಗುತ್ತದೆ. ಈ ಹಿನ್ನೆಲೆಯಲ್ಲಿ, ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಕಾಡುಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡಲು ಪೊಲೀಸ್ ಪಡೆಯೊಂದಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ನಿಯೋಜಿಸುವಂತೆ ಸೂಚಿಸಲಾಗಿದೆ.