ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿದ ಕೆ.ಅಣ್ಣಾಮಲೈ ಅವರನ್ನು ದೇಗುಲದ ಆಡಳಿತ ಮಂಡಳಿಯ ಇಒ ಸ್ವಾಗತಿಸಿದರು.
* ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ, ಪ್ರಾರ್ಥನೆ
ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ, ನಟ ವಿಜಯ್ ಮತ್ತು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಭೇಟಿಯ ಬಳಿಕ ಉಡುಪಿ ಜಿಲ್ಲೆಯ ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ನಿವೃತ್ತ ಖ್ಯಾತ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ರಾಜಕೀಯ ನಾಯಕ ಕೆ. ಅಣ್ಣಾಮಲೈ ಮಂಗಳವಾರ (ಜು.14) ಭೇಟಿ ನೀಡಿದ್ದರು. ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ದೇವಳಕ್ಕೆ ಆಗಮಿಸಿದ ಅಣ್ಣಾಮಲೈ ಅವರನ್ನು ಆಡಳಿತ ಮಂಡಳಿ ಹಾಗೂ ಅರ್ಚಕ ವೃಂದ ಆತ್ಮೀಯವಾಗಿ ಸ್ವಾಗತಿಸಿತು. ಬಳಿಕ ಅವರು ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ತನ್ನ ರಾಜ್ಯ ಹಾಗೂ ದೇಶದ ಸುಖ-ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸಿದರು.
ದೇವರ ದರ್ಶನದ ಬಳಿಕ ದೇವಳದ ವತಿಯಿಂದ ಅವರಿಗೆ ಶ್ರೀ ದೇವಿಯ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ತಮಿಳುನಾಡು ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. 'ವಿ ದಿ ಲೀಡರ್' ಎಂಬ ಹೊಸ ರಾಜಕೀಯ ಚಳವಳಿ ಆರಂಭಿಸಿರುವ ಅವರು, ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪಿಸಿ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಪರ್ಯಾಯ ನೀಡುವ ಉದ್ದೇಶ ಹೊಂದಿದ್ದಾಗಿ ಅಣ್ಣಾಮಲೈ ಇತ್ತೀಚೆಗೆ ಘೋಷಿಸಿದ್ದರು. ಆ ಹಿನ್ನೆಲೆಯಲ್ಲಿಯೇ ಅವರು ಕೊಲ್ಲೂರು ದೇವಳಕ್ಕೆ ಭೇಟಿ ನೀಡಿರಬಹುದು ಎನ್ನುವುದು ರಾಜಕೀಯ ಲೆಕ್ಕಾಚಾರವಾಗಿದೆ.