ಉಡುಪಿಯಲ್ಲಿರುವ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭುವನೇಂದ್ರ ಕಿದಿಯೂರು ಮಾತನಾಡಿದರು. ರವೀಂದ್ರ ನಾಯ್ಡು, ಹಿರಿಯಣ್ಣ ಸೇರಿಗಾರ್, ಫಜೀಮ್ ನಜೀರ್ ಅಹ್ಮದ್, ವಿಲಾಸಕುಮಾರ್, ಕಿರಣಕುಮಾರ್ ಇದ್ದರು.
* ಉಡುಪಿಯಲ್ಲಿ ಭುವನೇಂದ್ರ ಕಿದಿಯೂರು ಮಾಹಿತಿ
* ಲಾರ್ಡ್ಸ್ನಲ್ಲಿ ಕಲಿಯುವವರಿಗೆ ಪ್ರತಿಭಾ ಪುರಸ್ಕಾರ
ಉಡುಪಿ: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿಯೇ ಪ್ರಥಮ ಬಾರಿಗೆ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಉಡುಪಿಯ ಕಿದಿಯೂರು ಎಜುಕೇಷನ್ ಟ್ರಸ್ಟ್ ವತಿಯಿಂದ ಹಾಗೂ ಹೈದರಾಬಾದ್ನ ಆರ್ಜಿಎಫ್ ಸಂಸ್ಥೆಯ ಸಹಭಾಗಿತ್ವದಲ್ಲಿ ಡಿ.21ರಂದು ಕಿದಿಯೂರು ಹೋಟೆಲ್ನ ಅನಂತಶಯನ ಸಭಾಭವನದಲ್ಲಿ ಬೆಳಗ್ಗೆ 10ರಿಂದ 12ರ ವರೆಗೆ "ಪ್ರತಿಭಾನ್ವೇಷಣಾ ಪರೀಕ್ಷೆ' ಸ್ಪರ್ಧೆ ಆಯೋಜಿಸಿದ್ದೇವೆ ಎಂದು ಕಿದಿಯೂರು ಹೋಟೆಲ್ನ ಮಾಲೀಕ ಭುವನೇಂದ್ರ ಕಿದಿಯೂರು ಮಾಹಿತಿ ನೀಡಿದರು.
ಉಡುಪಿಯ ನಿಟ್ಟೂರು ಗ್ರಾಮದಲ್ಲಿರುವ ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ನಲ್ಲಿ ಗುರುವಾರ (ಡಿ.18) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯೂ ಸೇರಿದಂತೆ ರಾಜ್ಯದ ಯಾವುದೇ ಜಿಲ್ಲೆಯ ಹಾಗೂ ಸಿಬಿಎಸ್ಇ, ಸ್ಟೇಟ್ ಸೇರಿದಂತೆ ಯಾವುದೇ ಬೋರ್ಡ್ ವ್ಯವಸ್ಥೆಯ 1ರಿಂದ 9ನೇ ತರಗತಿಯ ಮಕ್ಕಳು ಪಾಲ್ಗೊಳ್ಳಬಹುದು. ತಲಾ ಟಾಪ್-10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಒಟ್ಟು 3 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಎಸ್ಎಸ್ಎಲ್ಸಿ ವರೆಗೂ ಪುರಸ್ಕಾರ
ಹೈದರಾಬಾದ್ನ ಆರ್ಜಿಎಫ್ ಸಂಸ್ಥೆಯ ಸಿಇಒ ರವೀಂದ್ರ ನಾಯ್ಡು ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುಮಾರು 800 ಶಾಲೆಗಳಿಗೆ ಶೈಕ್ಷಣಿಕ ನೆರವು ನೀಡುತ್ತಿದ್ದೇವೆ. ಶೈಕ್ಷಣಿಕ ಪಠ್ಯಕ್ರಮದೊಂದಿಗೆ ಬಾಲ್ಯದಲ್ಲಿಯೇ ಮಕ್ಕಳಿಗೆ ಎಲ್ಲ ರೀತಿಯ ಸವಾಲು ಎದುರಿಸುವ ತರಬೇತಿ ನೀಡುವ ವಿಶಿಷ್ಟ ಶಾಲೆ ಇದಾಗಿದೆ. ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಶೇ.60 ಪ್ರತಿಶತದಿಂದ ಶೇ.90 ಹಾಗೂ ಶೇ.90ಕ್ಕಿಂತ ಅಧಿಕ ಫಲಿತಾಂಶ (ನಾಲ್ಕು ವಿಭಾಗದಲ್ಲಿ) ಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಪರೀಕ್ಷೆ ಮುಗಿದ ವಾರದ ಬಳಿಕ ಫಲಿತಾಂಶ ಹಾಗೂ ಮಕ್ಕಳ ಹೆಸರು ತಿಳಿಸಲಾಗುವುದು. ಹೆಸರು ನೋಂದಣಿಗೆ ಲಾರ್ಡ್ಸ್ ಶಾಲೆ, ಕಿದಿಯೂರ್ ಹೋಟೆಲ್ ಸಂಪರ್ಕಿಸಬಹುದು. ಪರೀಕ್ಷೆಯ ದಿನ ನೇರವಾಗಿ ಆಗಮಿಸಿಯೂ ಹೆಸರು ನೀಡಬಹುದು. ಸ್ಪರ್ಧೆಯಲ್ಲಿ ಉತ್ತೀರ್ಣರಾದವರು ಲಾರ್ಡ್ಸ್ ಸ್ಕೂಲ್ನಲ್ಲಿ ಕಲಿಕೆಗೆ ಆಗಮಿಸಿದಲ್ಲಿ 10ನೇ ತರಗತಿವರೆಗೂ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಿದಿಯೂರು ಎಜುಕೇಷನ್ ಟ್ರಸ್ಟ್ನ ಆಡಳಿತಾಧಿಕಾರಿ ಹಿರಿಯಣ್ಣ ಸೇರಿಗಾರ್, ಸಂಸ್ಥೆಯ ಸಿಇಒ ಜೀಮ್ ನಜೀರ್ ಅಹ್ಮದ್, ಕಿದಿಯೂರು ಹೋಟೆಲ್ನ ಮೆನೇಜರ್ ವಿಲಾಸಕುಮಾರ್ ಉಪಸ್ಥಿತರಿದ್ದರು.
ರಾಜ್ಯದಲ್ಲಿಯೇ 'ಲಾರ್ಡ್ಸ್' ವಿಶಿಷ್ಟ ಶಾಲೆ
ಉಡುಪಿಯು ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದಲ್ಲಿಯೇ ಖ್ಯಾತಿ ಗಳಿಸಿದೆ. ಇಲ್ಲಿ ಅನೇಕ ಶಾಲೆಗಳಿದ್ದರೂ ಸಹ ವಿಶಿಷ್ಟ ಮಾದರಿಯ ಶಾಲೆ ಆರಂಭಿಸಬೇಕೆಂದು ನಾನು ಮತ್ತು ನನ್ನ ಪುತ್ರಿ ಯೋಚಿಸಿದ್ದೆವು. ಅದರಂತೆ ನಿಟ್ಟೂರು ಬಳಿ 'ಕಿದಿಯೂರ್ಸ್ ಲಾರ್ಡ್ಸ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್' ತಲೆ ಎತ್ತಿದೆ. ಒಂದು ಮಾಲ್ನಲ್ಲಿ ಹೇಗೆ ಜೀವನಕ್ಕೆ ಬೇಕಾದ ಎಲ್ಲ ಪ್ರಕಾರದ ಸಾಮಗ್ರಿ ಲಭಿಸುತ್ತದೆಯೋ ಅದೇ ರೀತಿ ಒಂದು ಶಾಲೆಯಲ್ಲಿ ಮಕ್ಕಳಿಗೆ ಕಲಿಕೆಯೊಂದಿಗೆ ಅವರ ಮುಂದಿನ ಭವಿಷ್ಯ, ಉದ್ಯೋಗಕ್ಕೆ ಪೂರಕವಾಗಿ ಬೇಕಿರುವ ಎಲ್ಲ ಬಗೆಯ ತರಬೇತಿ ಇಲ್ಲಿ 1ನೇ ತರಗತಿಯಿಂದಲೇ ಲಭಿಸುತ್ತದೆ. ನಮ್ಮ ಶಾಲೆಯ ಕಟ್ಟಡದ ವಿನ್ಯಾಸ ಹಾಗೂ ಇಲ್ಲಿರುವ ಶೈಕ್ಷಣಿಕ ಸೌಲಭ್ಯಗಳಿಗೆ ಶಾಲೆ ಆರಂಭಿಸಿದ ಮೊದಲ ವರ್ಷವೇ ಅತ್ಯುತ್ತಮ ಶಾಲೆ ಎಂಬ ಪ್ರಶಸ್ತಿಯೂ ಲಭಿಸಿದೆ. 1ರಿಂದ 5ನೇ ತರಗತಿಯ ವರೆಗಿನ ಮಕ್ಕಳಿಗೆ ಅಬಾಕಸ್, ರೋಬಾಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಇನ್ನಿತರ ಸ್ಪಾರ್ಕ್ ಕಾರ್ಯಕ್ರಮ ಹಾಗೂ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಐಐಟಿ, ಜೆಇಇ, ನೀಟ್, ಸಿವಿಲ್ ಸರ್ವೀಸಸ್, ಸಿಎ ಇನ್ನಿತರ ಇಂಟಿಗ್ರೇಟೆಡ್ ಫೌಂಡೇಷನ್ ಕೋಚಿಂಗ್ ನೀಡುತ್ತೇವೆ. ನಮ್ಮ ಶಾಲೆಯನ್ನು ರಾಜ್ಯದಲ್ಲಿಯೇ 'ದಿ ಬೆಸ್ಟ್ ಸ್ಕೂಲ್' ಆಗಿಸಲು ಸಂಕಲ್ಪ ತೊಟ್ಟಿದ್ದಾಗಿ ಭುವನೇಂದ್ರ ಕಿದಿಯೂರು ತಿಳಿಸಿದರು.
ಕಿದಿಯೂರ್ಸ್ ಲಾರ್ಡ್ಸ್ ಶಾಲೆಯು ಸಿಬಿಎಸ್ಇ ಶಿಕ್ಷಣ ವ್ಯವಸ್ಥೆಯ ವಸತಿಯುತ ಶಾಲೆಯಾಗಿದೆ. ನಮ್ಮ ಸಂಸ್ಕೃತಿಯನ್ನು ಅರಿಯದ ಶಿಕ್ಷಣ ವ್ಯರ್ಥ. ಹೀಗಾಗಿ ಇಲ್ಲಿ ಕಲಿಯುವ ಮಕ್ಕಳಿಗೆ ಪಠ್ಯಕ್ರಮವಷ್ಟೇ ಅಲ್ಲದೆ, ನಮ್ಮ ಆಚಾರ-ವಿಚಾರ, ಸಂಸ್ಕೃತಿ, ವಿವಿಧ ಕೌಶಲಗಳ ತರಬೇತಿಯನ್ನೂ ನೀಡಲಾಗುವುದು. ಬುದ್ಧಿಮತ್ತೆ ಹೆಚ್ಚಿಸುವ ಹಾಗೂ ಅವರಲ್ಲಿರುವ ಕೌಶಲ, ವ್ಯಕ್ತಿತ್ವ ಬೆಳೆಸುವ ಕಾರ್ಯ ಮಾಡಲಿದ್ದೇವೆ.