ಪರ್ಯಾಯ ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿದರು.
ಉಡುಪಿ: ರಾಜ್ಯದಲ್ಲಿ 2 ಕೋಟಿ ವಿದ್ಯಾರ್ಥಿಗಳಿದ್ದು, 8.5 ಲಕ್ಷ ಮಂದಿ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ 15 ಲಕ್ಷ ಮಕ್ಕಳನ್ನು ಸ್ಕೌಟ್ಸ್ ಮತ್ತು ಗೈಡ್ಸ್ಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದ್ದು, 1 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ರಾಜಾಂಗಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ರಾಜ್ಯದ 1200 ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂರ್ಜಸ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90 ರಿಂದ 95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ, ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಕೇವಲ ಕುಟುಂಬ ಅಥವಾ ಊರಿಗೆ ಕೀರ್ತಿ ತಂದಿಲ್ಲ. ಬದಲಿಗೆ ಈ ದೇಶದ ದೊಡ್ಡ ಸಂಪನ್ಮೂಲವಾಗಿದ್ದಾರೆ ಎಂದರು.
8 ರಿಂದ 13 ವರ್ಷದೊಳಗಿನ ಮಕ್ಕಳು ಒಂದು ತಿಂಗಳ ಕಾಲ ಮೊಬೈಲ್, ಟಿವಿ ದೂರವಿಟ್ಟು, ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಅವರ ಮೆದುಳು ಸೂಪರ್ ಕಂಪ್ಯೂಟರ್ನಂತೆ ಕೆಲಸ ಮಾಡುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ ಪರಿಸರ ಜ್ಞಾನ, ಸ್ವಚ್ಛತೆ, ಪ್ರಾಣಿ-ಸಸ್ಯಗಳ ಸಂರಕ್ಷಣೆ, ಮಣ್ಣು ಮತ್ತು ನೀರಿನ ಉಳಿತಾಯದಂತಹ ಜೀವನ ಮೌಲ್ಯಗಳನ್ನು ಕಲಿಸುತ್ತದೆ ಎಂದರು.
ಕಾಲೇಜು ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಪತಿ ಪರೀಕ್ಷೆ ಉತ್ತೀರ್ಣರಾದರೆ ಎಂಬಿಬಿಎಸ್, ಎಂಜಿನಿಯರಿಂಗ್, ಐಎಎಸ್ನಲ್ಲಿ ಮಾತ್ರವಲ್ಲದೆ ರೈಲ್ವೆ ಇಲಾಖೆ, ಪೊಲೀಸ್ ಮತ್ತು ರಕ್ಷಣಾ ಇಲಾಖೆಗಳ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಹಾಗೂ ಆದ್ಯತೆ ದೊರೆಯಲಿದೆ ಎಂದು ತಿಳಿಸಿದರು.
ಪರ್ಯಾಯ ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಡಿಡಿಪಿಯು ಮಾರುತಿ, ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ , ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಪೈ, ಕಾರ್ಯದರ್ಶಿ ಆನಂದ ಅಡಿಗ, ಕೋಶಾಧಿಕಾರಿ ಹರಿಪ್ರಸಾದ್ ರೈ, ಲಯನ್ಸ್ ಸಂಸ್ಥೆಯ ಎಂ.ಎನ್. ಹೆಗ್ಡೆ, ಸ್ಥಳಿಯ ಸಂಸ್ಥೆಯ ಪ್ರತಿನಿಧಿಗಳಾದ ಗುಣರತ್ನ, ದಿವಾಕರ ಸನಿಲ್, ಮಹಮ್ಮದ್ ಮೌಲಾ, ಎಎಸ್ಒ ಸುಮನಾ ಶೇಖರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಬ್, ಬುಲ್ ಬುಲ್ ಮಕ್ಕಳ 'ಗೋಲ್ಡನ್ ಆರೋ' ಪ್ರಶಸ್ತಿ ಹಾಗೂ 'ರಾಷ್ಟ್ರಪತಿ ಪ್ರಮಾಣ ಪತ್ರ' ವಿತರಿಸಲಾಯಿತು. ಕಲಬುರಗಿ, ದಾವಣಗೆರೆ, ಬೆಳಗಾವಿ ಹಾಗೂ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.
"
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ಭವ್ಯ ಭಾರತ ಕಟ್ಟಲು ಸಾಧ್ಯ. ಅವರನ್ನು ಸಮಾಜದ ಜೊತೆ ಬೆರೆಯುವಂತೆ ಮಾಡಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಈ ಮೂಲಕ ಸಮಾಜದ ಋಣ ತೀರಿಸಬೇಕು. ದೇವರಿಗೆ ಮೊದಲು, ನಂತರ ದೇಶ, ಕೊನೆಗೆ ದೇಹಕ್ಕೆ ಪ್ರಾಶಸ ನೀಡುವುದನ್ನು ಕಲಿಸಬೇಕು. ಇದಕ್ಕಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗಳಿಗೆ ಸೇರ್ಪಡೆಗೊಳ್ಳಬೇಕು.
— ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶ