ಉಡುಪಿಯಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ನ್ಯಾ. ನಿತಿನ್​ ಯಶ್ವಂತ್​ ರಾವ್​ ಉದ್ಘಾಟಿಸಿದರು. ಅಬೀದ್​ ಗದ್ಯಾಳ್​, ಪ್ರೇಮಮೂರ್ತಿ ಕೆ., ರತ್ನಾ, ಡಾ. ಉದಯಕುಮಾರ್​ ಶೆಟ್ಟಿ, ಎಸ್​.ಎಸ್​. ಕಾದ್ರೋಳ್ಳಿ ಇತರರಿದ್ದರು. 
ಉಡುಪಿ

ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕಾಳಜಿ ತೋರಿ

* ನ್ಯಾಯಾಧೀಶ ನಿತಿನ್​ ಯಶ್ವಂತ್​ ರಾವ್​ ಸಲಹೆ

* ಉಡುಪಿಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ

ಉಡುಪಿ: ವಯಸ್ಸು ದೇಹಕ್ಕೆ ಆಗುತ್ತದೆಯೇ ಹೊರತು ಮನಸ್ಸಿಗಲ್ಲ. ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಜವಾಬ್ದಾರಿ. ಅವರಿಗೆ ಗೌರವ, ಕಾಳಜಿ ತೋರುವುದನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು. ಮಕ್ಕಳು ತಮ್ಮ ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸದೆ ಕುಟುಂಬದಲ್ಲಿಯೇ ಬದುಕಲು ಅವಕಾಶ ಮಾಡಿಕೊಡಬೇಕು. ಸಂಧ್ಯಾ ಕಾಲದಲ್ಲಿ ಅವರಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ನಿತಿನ್​ ಯಶ್ವಂತ್​ ರಾವ್​ ಹೇಳಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಿರಿಯ ನಾಗರಿಕರ ವೇದಿಕೆ/ಸಂಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆ ಸಹಕಾರದಲ್ಲಿ ಸೋಮವಾರ (ಸೆ.28) ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ತ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಹಿರಿಯರ ರಕ್ಷಣೆಗಿದೆ ಕಾಯಿದೆ

ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕ&ಪೋಷಕರ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ-2007 ಜಾರಿಗೆ ತರಲಾಗಿದೆ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಹಿರಿಯ ನಾಗರಿಕರ ವಿರುದ್ಧ ಪ್ರಕರಣ ದಾಖಲಾದಲ್ಲಿ ಅಥವಾ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತವಾಗಿ ಕಾನೂನಿನ ನೆರವು ನೀಡಲಾಗುತ್ತಿದೆ. ಅಗತ್ಯವುಳ್ಳವರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯಕುಮಾರ್​ ಶೆಟ್ಟಿ ಮಾತನಾಡಿದರು. ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೋಳ್ಳಿ, ಲೀಡ್​ ಬ್ಯಾಂಕ್​ ಮ್ಯಾನೇಜರ್​ ಹರೀಶ್​, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸದಾನಂದ ಹೆಗಡೆ, ಗೌರವಾಧ್ಯಕ್ಷ ಎಚ್​. ವಿಶ್ವನಾಥ್​ ಹೆಗ್ಡೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ನಿರಂಜನ್​ ಭಟ್​, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ವಾಸಂತಿ ರಾವ್​ ಕೊರಡ್ಕಲ್​, ಬಳಕೆದಾರರ ವೇದಿಕೆಯ ಅಧ್ಯಕ್ಷ ಹರಿಕೃಷ್ಣ ಶಿವತ್ತಾಯ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮುರುಳೀಧರ್​, ತಾಲೂಕು ಹಿರಿಯ ನಾಗರಿಕರ ವೇದಿಕೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್​ಕ್ರಾಸ್​ ಜಿಲ್ಲಾ ಗೌರವ ಕಾರ್ಯದರ್ಶಿ ಗಣನಾಥ್​ ಶೆಟ್ಟಿ ಎಕ್ಕಾರು ಹಾಗೂ ವಿಶೇಷ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್​. ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಇಲಾಖೆಯ ಯೋಜನಾ ಸಹಾಯಕ ಶಿವಾಜಿ ಎ.ಕೆ. ವಂದಿಸಿದರು.

ಮಾರ್ಗದರ್ಶಿ ಧ್ಯಾನ, ಸಂಗೀತ ಚಿಕಿತ್ಸೆ

ಹಿರಿಯ ನಾಗರಿಕರಿಕರಿಗೆ ಬಿರುಸಿನ ನಡಿಗೆ, ಬಕೆಟ್​ಗೆ ಬಾಲ್​ ಎಸೆಯುವುದು, ಪುರುಷರಿಗೆ ಕೇರಂ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಸಾಂಸ್ಕೃತಿಕ ವಿಭಾಗದಲ್ಲಿ ಗಾಯನ, ಏಕಪಾತ್ರಾಭಿನಯ ಸ್ಪರ್ಧೆ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ಬ್ರಹ್ಮಕುಮಾರಿ ಡಿ.ಕೆ. ಸುಮಾ ಅವರಿಂದ ಹಿರಿಯ ನಾಗರಿಕರಿಗೆ ಮಾರ್ಗದರ್ಶಿ ಧ್ಯಾನ, ಗಾಯಕ ಡಾ. ಸಚಿನ್​ ಸಾಲ್ಯಾನ್​ ಅವರಿಂದ ಸಂಗೀತ ಚಿಕಿತ್ಸೆ ಕಾರ್ಯಕ್ರಮ ಗಮನ ಸೆಳೆಯಿತು.

ಹಿರಿಯ ನಾಗರಿಕರು ವಯಸ್ಸಾಗಿದೆಯೆಂದು ಚಿಂತಿಸದೆ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಹಿರಿಯ ನಾಗರಿಕರ ಮನೋಚೈತನ್ಯಕ್ಕಾಗಿ ನಡೆಸುವ ಇಂತಹ ಕಾರ್ಯಕ್ರಮಗಳಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳಬೇಕು. ಇದರಿಂದ ಮನಸ್ಸು ಹಗುರಾಗುವುದಲ್ಲದೆ, ಆವರಿಸಿರುವ ಖಿನ್ನತೆ, ದು:ಖವೂ ನಿವಾರಣೆ ಆಗುತ್ತದೆ.
> ಅಬೀದ್​ ಗದ್ಯಾಳ್​. ಅಪರ ಜಿಲ್ಲಾಧಿಕಾರಿ.