ಉಡುಪಿ: ಮಂಗಳೂರು-ಮುಂಬಯಿ ಪ್ರಯಾಣದ ಮತ್ಸ್ಯಗಂಧ, ಸಿಎಸ್ಟಿ ಮತ್ತು ಇನ್ನಿತರ ರೈಲುಗಳಲ್ಲಿ ಪ್ರಯಾಣಿಕರನ್ನು ವಂಚಿಸಿ ನಿರಂತರ ಕಳ್ಳತನ ನಡೆಯುತ್ತಿದೆ. ರತ್ನಾಗಿರಿ ನಿಲ್ದಾಣದ ಬಳಿ ಅತಿ ಹೆಚ್ಚು ಲೂಟಿ ಮಾಡಲಾಗುತ್ತಿದೆ ಎಂಬ ದೂರು ಬರುತ್ತಿದೆ. ಕೇಂದ್ರ ರೈಲ್ವೆ ಸುರಕ್ಷತಾ ಇಲಾಖೆ ತಕ್ಷಣ ಕ್ರಮ ಜರುಗಿಸಿ ಪ್ರಯಾಣಿಕರಿಗೆ ಭದ್ರತೆ ಒದಗಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಇಲಾಖೆಯನ್ನು ಒತ್ತಾಯಿಸಿದರು.
ದೆಹಲಿಯಲ್ಲಿ ಕೇಂದ್ರ ರೈಲ್ವೆ ಬೋರ್ಡಿನ ಸುರಕ್ಷತಾ ವಿಭಾಗದ ಮಹಾನಿರ್ದೇಶಕಿ ಸೋನಿಯಾ ಶಮಾರ್ ಅವರನ್ನು ಶುಕ್ರವಾರ (ಅ.9) ಭೇಟಿಯಾಗಿ ಲಿಖಿತ ಮಾಹಿತಿ ಒದಗಿಸಿ, ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಅರ್ಪಿಸಿದರು.
ತನಿಖಾ ತಂಡ ರಚಿಸಿ
ರೈಲಿನಲ್ಲಿ ಅಗತ್ಯವಿರುವ ಕಡೆ ಸಿಸಿಟಿವಿ ಅಳವಡಿಕೆ ಮತ್ತು ಇದುವರೆಗೂ ನಡೆದ ವ್ಯವಸ್ಥಿತ ಸಂಘಟಿತ ಅಪರಾಧ ಮಾದರಿಯ ಕಳ್ಳತನವನ್ನು ತನಿಖೆ ನಡೆಸಬೇಕು. ಅಗತ್ಯವಿದ್ದರೆ ಕೇರಳ, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಈ ನಾಲ್ಕು ರಾಜ್ಯಗಳ ಸಹಯೋಗದೊಂದಿಗೆ ತನಿಖಾ ತಂಡ ರಚಿಸಬೇಕು ಎಂದು ಸಂಸದ ಕೋಟ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಸ್ಪಂದಿಸಿದ ಸೋನಿಯಾ ಶಮಾರ್, ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಪರಾಧಗಳ ಪತ್ತೆಗೆ ಕ್ರಮ ಜರುಗಿಸುವಂತೆ ಹಾಗೂ ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನವಿತ್ತರು.
ಮುಂದಿನ ವಾರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ರೈಲ್ವೆ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಅಗತ್ಯ ಸುರಕ್ಷತೆ ಹಾಗೂ ಭದ್ರತೆ ನೀಡಲು ಮನವಿ ಸಲ್ಲಿಸುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.