ಉಡುಪಿ: ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಂಕೋಲಾ ತಾಲೂಕಿನ ಬೇಲೆಕೇರಿಯ ಮೀನುಗಾರ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೀವನ ನಿರ್ವಹಣೆಗೆ ಮೀನು ಮಾರಾಟ ಮಾಡಿಕೊಂಡಿದ್ದ ಮಹಿಳೆಗೆ ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಅಧ್ಯಕ್ಷ ರವಿ ಟಿ. ನಾಯ್ಕ್ ತಿಳಿಸಿದರು.
ಯಲ್ಲಾಪುರದಲ್ಲಿ ನಡೆದ ಘಟನೆಯನ್ನು ಖಂಡಿಸಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಕಾರ್ಯಕಾರಿ ಮಂಡಳಿಯ ನಿಯೋಗದೊಂದಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಶುಕ್ರವಾರ ಭೇಟಿಯಾಗಿ ಮನವಿ ಸಲ್ಲಿಸಿ ಮಾತನಾಡಿದರು.
ಮನವಿ ಸ್ವೀಕರಿಸಿದ ಸಂಸದ ಕೋಟ ಪೂಜಾರಿ, ಈ ವಿಚಾರವಾಗಿ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ನಿಯೋಗವು ಕುಂದಾಪುರ ಶಾಸಕ ಕಿರಣಕುಮಾರ್ ಕೊಡ್ಗಿ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿತು. ಅಲ್ಲದೆ, ಉಡುಪಿ ನಗರಾಭಿವೃದ್ಧಿ ಯೋಜನಾ ನಿರ್ದೇಶಕರ ಮೂಲಕ ಜಿಲ್ಲಾಡಳಿತಕ್ಕೂ ಸಹ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿ.ಸದಾನಂದ್ ಖಾರ್ವಿ, ಕೇಂದ್ರ ಕಾರ್ಯದರ್ಶಿ ವಾಸುದೇವ್ ಖಾರ್ವಿ, ಖಜಾಂಚಿ ರವಿಚಂದ್ರ ಖಾರ್ವಿ, ಉಪಾಧ್ಯಕ್ಷ ಪ್ರಕಾಶ್ ಆರ್. ಖಾರ್ವಿ, ಮಾಜಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಖಾರ್ವಿ, ನಿರ್ದೇಶಕರಾದ ವಿ.ಕೆ. ಸುರೇಶ್ ಖಾರ್ವಿ, ಅಣ್ಣಪ್ಪ ಖಾರ್ವಿ, ಮಾಧವ ಖಾರ್ವಿ, ರಮೇಶ್ ಖಾರ್ವಿ ಭಟ್ಕಳ, ಮಾಜಿ ಅಧ್ಯಕ್ಷ ಕೆ.ಬಿ. ಖಾರ್ವಿ, ನಾಗಪ್ಪಯ್ಯ ಪಟೇಲ್ ಗಂಗೊಳ್ಳಿ, ಸುರೇಂದ್ರ ಖಾರ್ವಿ ಗಂಗೊಳ್ಳಿ, ಮಡಿ ವಿಶ್ವನಾಥ ಖಾರ್ವಿ, ಭವನದ ವ್ಯವಸ್ಥಾಪಕ ನಾಗರಾಜ್ ಖಾರ್ವಿ ಇದ್ದರು.