ಉಪ್ಪಿನಂಗಡಿ ರಸ್ತೆ ಮಧ್ಯೆ ಅಗೆದಿರುವ ಕಾರಣ ನೀರು ನಿಂತಿರುವುದು. 
ಉಡುಪಿ

ಉಪ್ಪಿನಂಗಡಿ ರಸ್ತೆ ಮಧ್ಯೆ ಸ್ವಿಮ್ಮಿಂಗ್‌ಪೂಲ್

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ 

ಒಂದೆಡೆ ಹೆದ್ದಾರಿ ಕಾಮಗಾರಿ, ಇನ್ನೊಂದೆಡೆ ಸಂಚಾರ ನಿಯಂತ್ರಿಸಬೇಕಾದ ಪೊಲೀಸರ ಕಣ್ಮರೆಯಿಂದಾಗಿ ಉಪ್ಪಿನಂಗಡಿ ಪಟ್ಟಣ ಪ್ರವೇಶ ಮತ್ತು ನಿರ್ಗಮನ ತ್ರಾಸದಾಯಕವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. 
ಹೆದ್ದಾರಿಯಿಂದ ಉಪ್ಪಿನಂಗಡಿ ಪೇಟೆಯನ್ನು ಸಂಪರ್ಕಿಸುವ ರಸ್ತೆಯನ್ನು ಕಾಂಕ್ರೀಟೀಕರಣಕ್ಕಾಗಿ ಒಂದು ಪಾರ್ಶ್ವ ಅಗೆಯಲಾಗಿದೆ.  ಮಳೆ ಹೆಚ್ಚಾದ ಕಾರಣ ಕಾಮಗಾರಿ ತೀರಾ ಮಂದಗತಿಯಲ್ಲಿ ನಡೆಯುತ್ತಿದೆ. ಅಗೆದ ರಸ್ತೆಯ ಗುಂಡಿಯಲ್ಲಿ ಮಳೆ ನೀರು ನಿಂತು ಈಜು ಕೊಳದಂತಾಗಿದ್ದು, ನಡೆದಾಡಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಪಾರ್ಶ್ವದಲ್ಲೇ ವಾಹನಗಳು ಸಂಚರಿಸಬೇಕಿದೆ. ಭಾರಿ ವಾಹನಗಳ ಸಂಚಾರದ ವೇಳೆ ವಾಹನ ದಟ್ಟನೆಯುಂಟಾಗುತ್ತಿದೆ. ತಾಸುಗಟ್ಟಸೆ ವಾಹನಗಳು ರಸ್ತೆಯಲ್ಲೇ ನಿಲ್ಲುವ ಸ್ಥಿತಿಯಿದೆ.
ಕಳೆದ ಕೆಲ ದಿನಗಳಿಂದ ಈ ಸಮಸ್ಯೆ ಇಲ್ಲಿ ತಲೆದೋರಿದರೂ ವಾಹನ ಸಂಚಾರವನ್ನು ಸುಗಮಗೊಳಿಸಬೇಕಾದ ಸಂಚಾರ ಪೊಲೀಸರು ಸ್ಥಳದಲ್ಲೇ ಇಲ್ಲ.
 ಕಂಡಕ್ಟರ್ ಕೆಲಸಕ್ಕೆ ಶ್ಲಾಘನೆ: ಮಂಗಳವಾರ ಸಂಜೆ ಭಾರಿ ಟ್ರಾಫಿಕ್ ಜಾಮ್ ಉಂಟಾದಾಗ ಬಸ್ ಕಂಡಕ್ಟರ್ ಒಬ್ಬರು ಬಸ್ಸಿನಿಂದ ಇಳಿದು ವಾಹನಗಳ ಸುಗಮ ಸಂಚಾರಕ್ಕೆ ಶ್ರಮಿಸುತ್ತಿದ್ದು ಸಾರ್ವಜನಿಕ ಶ್ಲಾಘನೆಗೆ ಒಳಗಾಯಿತು. 

ಹೆದ್ದಾರಿ ಕಾಮಗಾರಿ ಜನಸ್ನೇಹಿಯಾಗಿ ನಡೆಯಲಿ

 ಪ್ರಸಕ್ತ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯು ಜನ ಸಂಚಾರ ಹಾಗೂ ವಾಹನ ಸಂಚಾರದ ಪ್ರಮುಖ ಸ್ಥಳದಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಳ್ಳುವಂತಾಗಿದೆ. ಈ ಸೂಕ್ಷ್ಮ ಸ್ಥಳದಲ್ಲಿ ಕಾಮಗಾರಿ ಗುತ್ತಿಗೆ ಸಂಸ್ಥೆಯು ಆದ್ಯತೆಯ ನೆಲೆಯಲ್ಲಿ ರಾತ್ರಿ ವೇಳೆ ಕಾಮಗಾರಿ ನಡೆಸುವ ಬಗ್ಗೆ ಗಮನ ಹರಿಸಿದರೆ ಅನಗತ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ಹಿರಿಯ ವರ್ತಕ ಯು.ರಾಮ ಹೇಳುತ್ತಾರೆ. 

ಹೆದ್ದಾರಿ ಕಾಮಗಾರಿ ಕಾರಣದಿಂದಾಗಿ ಸಂಚಾರ ದಟ್ಟನೆಯ ಸಮಯದಲ್ಲಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದು ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು.

— ಝಕಾರಿಯ ಕೊಡಿಪ್ಪಾಡಿ, ವರ್ತಕ ಸಂದ ಮುಂದಾಳು