ಉಡುಪಿಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್​.ಜಯಪ್ರಕಾಶ್​ ಕೆದ್ಲಾಯ ಮಾತನಾಡಿದರು. ಹರೀಶ್​ ಶೆಟ್ಟಿ, ಕೀರ್ತಿ ಶೆಟ್ಟಿ, ರಮೇಶ್​ ಉಪಾಧ್ಯ, ಯೋಗೀಶ್​ ಶೆಟ್ಟಿ ಇದ್ದರು. 
ಉಡುಪಿ

ಬಾಲಗಣೇಶನ 'ಸುವರ್ಣ ಸಂಭ್ರಮ' ಸೆ.14ರಿಂದ

ಸಮಿತಿಯ ಅಧ್ಯಕ್ಷ ಎಚ್​.ಜಯಪ್ರಕಾಶ್​ ಕೆದ್ಲಾಯ ಮಾಹಿತಿ

* ಸಹಸ್ರ ನಾರಿಕೇಲ ಗಣಯಾಗ, ಅನ್ನಸಂತರ್ಪಣೆ 

ಉಡುಪಿ: ಬಾಲಗಣೇಶೋತ್ಸವ ಸಮಿತಿಯ ಅಂಬಲಪಾಡಿಯ 50ನೇ ವರ್ಷದ ನಿಮಿತ್ತ ಸೆ.14ರಿಂದ ಸೆ.20ರ ವರೆಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಎದುರಿನ ಮೈದಾನದಲ್ಲಿ 'ಸುವರ್ಣ ಸಂಭ್ರಮ' ಸಾರ್ವಜನಿಕ ಮಹೋತ್ಸವ ಆಯೋಜಿಸಲಾಗಿದೆ. ಸೆ.17ರಂದು ಬೆಳಗ್ಗೆ ಸಹಸ್ರ ನಾರಿಕೇಲ ಗಣಯಾಗ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5:30ಕ್ಕೆ ಅದಮಾರು ಮಠದ ವಿಶ್ವಪ್ರಿಯ ಶ್ರೀಪಾದರು ಸುವರ್ಣ ಮಹೋತ್ಸವದ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಾಡೋಜ ಡಾ. ಜಿ.ಶಂಕರ್​ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಎಚ್​.ಜಯಪ್ರಕಾಶ್​ ಕೆದ್ಲಾಯ ಮಾಹಿತಿ ನೀಡಿದರು.
ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ಸೆ.12) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1976ರಲ್ಲಿ 10 ವರ್ಷದೊಳಗಿನ ಬಾಲಕರು ಧೂಪದ ಕಾಯಿಯೊಳಗಿನ ಗಣೇಶನ ಆಕೃತಿ ಇರುವುದನ್ನು ಕಂಡು ಅದನ್ನು ಮರದ ಬುಡದಲ್ಲಿಟ್ಟು ಅವಲಕ್ಕಿ-ಬೆಲ್ಲ ನೈವೇದ್ಯ ಮಾಡಿ ಪೂಜಿಸಿದ್ದರು. ನಂತರ ಇದುವೇ ಬಾಲಗಣೇಶೋತ್ಸವ ಸಮಿತಿಯಾಗಿ ಪ್ರತಿವರ್ಷ ಅದ್ದೂರಿಯಾಗಿ ಉತ್ಸವ ಆಚರಿಸುತ್ತ ಬರಲಾಗಿದೆ ಎಂದು ಇತಿಹಾಸ ತಿಳಿಸಿದರು.
ಅಶಕ್ತರಿಗೆ ಆರ್ಥಿಕ ಸಹಕಾರ
ಪ್ರಸಕ್ತ 50ನೇ ವರ್ಷದ ನಿಮಿತ್ತ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗಣೇಶೋತ್ಸವದ ನಿಮಿತ್ತ ಆಯೋಜಿಸಿದ್ದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಅಶಕ್ತರಿಗೆ ಸಹಾಯ, ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬವೊಂದಕ್ಕೆ ಮನೆ ಕಟ್ಟಿಕೊಡುವ ಸಂಕಲ್ಪ ಹೀಗೆ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪ್ರತಿದಿನವೂ ಸಹ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.19ರಂದು ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಿತಿಯ ಗೌರವಾಧ್ಯಕ್ಷ ನಿ.ಬೀ. ವಿಜಯ್​ ಬಲ್ಲಾಳ್​ ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಬೃಹತ್​ ಶೋಭಾಯಾತ್ರೆ

ವಿವಿಧ ಕ್ಷೇತ್ರಗಳ ಸಾಧಕರಾದ ಮೀರಾ ಭಟ್ಟ, ಜಯಕರ್​ ಶೆಟ್ಟಿ, ರಾಘವೇಂದ್ರ ಉಪಾಧ್ಯ, ಜಯಾನಂದ್​ ಶೆಟ್ಟಿ ಅವರನ್ನು ಗೌರವಿಸಲಿದ್ದೇವೆ. ಸೆ.20ರಂದು ಅದ್ದೂರಿ ಮೆರವಣಿಗೆಯ ಮೂಲಕ ಗಣೇಶನ ವಿಸರ್ಜನಾ ಮೆರವಣಿಗೆ ನಡೆಯಲಿದೆ. ತನ್ನಿಮಿತ್ತ ಬೃಹತ್​ ಶೋಭಾಯಾತ್ರೆ ಆಯೋಜಿಸಿದ್ದು ಕುಣಿತ ಭಜನಾ ತಂಡ, ಕೀಲು ಕುದುರೆ, ತಾಲೀಮು, ಮಂಗಳವಾದ್ಯ, ಚಂಡೆ, 18ಕ್ಕೂ ಅಧಿಕ ಆಕರ್ಷಕ ಟ್ಯಾಬ್ಲೋ, ನಾಸಿಕ್​ ಬ್ಯಾಂಡ್​, ಹುಲಿ ವೇಷ, ವಿವಿಧ ಕಲಾ ತಂಡಗಗಳು ಪಾಲ್ಗೊಳ್ಳಲಿವೆ ಎಂದು ಎಚ್​.ಜಯಪ್ರಕಾಶ್​ ಕೆದ್ಲಾಯ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಾಲಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹರೀಶ್​ ಶೆಟ್ಟಿ, ಅಧ್ಯಕ್ಷ ಕೀರ್ತಿ ಶೆಟ್ಟಿ, ಕಾರ್ಯದರ್ಶಿ ರಮೇಶ್​ ಉಪಾಧ್ಯ, ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಯೋಗೀಶ್​ ಶೆಟ್ಟಿ ಇದ್ದರು.