ಕುಂಪಲದಲ್ಲಿ ಮಧ್ಯವಯಸ್ಕ ದಯಾನಂದ್ ಎಂಬವರು ಬೀದಿನಾಯಿಯ ದಾಳಿಗೆ ತುತ್ತಾಗಿ ಮೃತಪಟ್ಟ ಪ್ರಕರಣದಲ್ಲಿ ಸಂಶಯ ವ್ಯಕ್ತಪಡಿಸಿ ಅವರ ಸಹೋದರ ಗಣೇಶ್ ಗಟ್ಟಿ ಎಂಬುವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ (ದ.ಕ.): ಕುಂಪಲದಲ್ಲಿ ಮಧ್ಯವಯಸ್ಕ ದಯಾನಂದ್ ಎಂಬವರು ಬೀದಿನಾಯಿಯ ದಾಳಿಗೆ ತುತ್ತಾಗಿ ಮೃತಪಟ್ಟ ಪ್ರಕರಣದಲ್ಲಿ ಸಂಶಯ ವ್ಯಕ್ತಪಡಿಸಿ ಅವರ ಸಹೋದರ ಗಣೇಶ್ ಗಟ್ಟಿ ಎಂಬುವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ದಯಾನಂದ್ ಅವರ ಸಾವಿಗೆ ಕಾರಣವಾಗಿದೆ ಎನ್ನಲಾಗಿದ್ದ ಶ್ವಾನವೂ ಸಾವೀಗೀಡಾಗಿದೆ. ಅದರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಬಳಿಕವೇ ಸಾವಿಗೆ ಕಾರಣ ತಿಳಿದು ಬರಲಿದೆ.
ದಯಾನಂದ ಅವರ ರಕ್ತಸಿಕ್ತ ಮೃತದೇಹ ಶುಕ್ರವಾರ ಬೆಳಗ್ಗೆ ಕುಂಪಲ ಬೈಪಾಸ್‌ನಲ್ಲಿರುವ ಮನೆಯೊಂದರ ಜಗಲಿಯ ಬಳಿ ಪತ್ತೆಯಾಗಿತ್ತು. ಪಕ್ಕದಲ್ಲೇ ಮುಖದಲ್ಲಿ ರಕ್ತಸಿಕ್ತವಾಗಿದ್ದ ಬೀದಿ ನಾಯಿಯೊಂದಿತ್ತು. ಧಾವಿಸಿ ಬಂದ ಜನರನ್ನು ಕಂಡು ಓಡಿ ಹೋಗಿದ್ದ ನಾಯಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲಾಗಿತ್ತು. ಬೈಪಾಸಿನಲ್ಲಿರುವ ಲಾಂಡ್ರಿಯೊಂದರ ಸಿಟೌಟ್‌ನಲ್ಲಿ ಮಲಗಿದ್ದ ವ್ಯಕ್ತಿಯನ್ನು ನಾಯಿ ದಾಳಿ ಮಾಡಿ, ಓಡಿಹೋದಾಗ ರಸ್ತೆಯ ಇನ್ನೊಂದು ಭಾಗದಲ್ಲಿರುವ ಮನೆ ಆವರಣವರೆಗೆ ಬೆನ್ನಟ್ಟಿ ಭೀಕರವಾಗಿ ದಾಳಿ ನಡೆಸಿ ಕೊಂದು ಹಾಕಿತ್ತು ಎಂದು ಪೊಲೀಸರು ತಿಳಿಸಿದ್ದರು.
ಆದರೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮೃತರ ಸಹೋದರ, ಅಣ್ಣನ ಮೃತದೇಹದ ಮುಖ ಹಾಗೂ ಕೈಗಳಲ್ಲಿ ಪರಚಿದ ಗಾಯಗಳಾಗಿವೆ. ಕಣ್ಣು ಹಾಗೂ ಮುಖದ ಅರ್ಧ ಭಾಗ ಕಿತ್ತು ಹೋಗಿರುವುದರಿಂದ ಸಂಶಯವಿದೆ. ಸೂಕ್ತ ತನಿಖೆ ನಡೆಸಬೇಕು ಎಂದು ದೂರು ನೀಡಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.