ಉಳ್ಳಾಲ: ಮೂರು ದಿನದ ಹಿಂದೆ ಕೋಟೆಪುರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೀನುಗಾರನ ಶವ ಪತ್ತೆಯಾಗಿದ್ದು, ಮರಣೋತ್ತರ ವರದಿಯಲ್ಲಿ ಮೃತದೇಹದಲ್ಲಿ ಗಾಯಗಳು ಕಂಡುಬಂದ ಹಿನ್ನೆಲೆಯಲ್ಲಿ ಇದೊಂದು ಕೊಲೆ ಎನ್ನುವ ಸಂಶಯ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯ ಕಿರಿಮಂಜೇಶ್ವರ ನಿವಾಸಿ, ಮೀನುಗಾರ ನಾರಾಯಣ(31) ಆ.3ರಂದು ಮೀನುಗಾರಿಕೆಗಾಗಿ ಮಂಗಳೂರಿನ ದಕ್ಕೆಯಿಂದ ಇತರ ಮೀನುಗಾರರ ಜತೆ ಬೋಟ್‌ನಲ್ಲಿ ತೆರಳಿದ್ದರು. ಆ.9ರಂದು ಹಿಂದಿರುಗುತ್ತಿದ್ದ ವೇಳೆ ನೇತ್ರಾವತಿ ನದಿ ಸೇರುವ ಅಳಿವೆ ಬಾಗಿಲಿನಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಈ ಸಂಬಂಧ ನಾರಾಯಣ ಅವರ ಸಹೋದರ ಕೃಷ್ಣಪ್ಪ ಆ.10ರಂದು ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆ.17ರಂದು ಕೋಟೆಪುರ ಮಸೀದಿ ಹಿಂಭಾಗದ ಕಡಲ ಕಿನಾರೆಯಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ನಾರಾಯಣರದ್ದೆಂದು ಕೃಷ್ಣಪ್ಪ ಗುರುತಿಸಿದ್ದರು. ಆದರೆ ಶವದ ಗುರುತು ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಡಿಎನ್‌ಎ ಪರೀಕ್ಷೆ ಅಗತ್ಯವಿತ್ತು. ಉಳ್ಳಾಲ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು.
ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಮೃತದೇಹದ ತಲೆ ಬುರುಡೆಗೆ ಆಯುಧ ಹಾಗೂ ಸುತ್ತಿಗೆಯಂತಹ ವಸ್ತುವಿನಿಂದ ಹೊಡೆದಿರುವ ಗುರುತು ಪತ್ತೆಯಾಗಿವೆ. ಹೊಟ್ಟೆಯ ಭಾಗದಲ್ಲೂ ಹರಿತವಾದ ಆಯುಧದಿಂದ ಉಂಟಾದ ಗಾಯಗಳಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಅವರನ್ನು ಕೊಲೆಗೈದು ಸಮುದ್ರಕ್ಕೆ ಎಸೆದಿರುವ ಸಂಶಯದ ಮೇರೆಗೆ ಅಸಹಜ ಸಾವು ಪ್ರಕರಣವನ್ನು ಶಂಕಿತ ಕೊಲೆ ಪ್ರಕರಣ ಎಂದು ಉಳ್ಳಾಲ ಠಾಣೆ ಪೊಲೀಸರು ದಾಖಲಿಸಿದ್ದಾರೆ.
ತನಿಖೆ ಮುಂದುವರಿಸಿರುವ ಪೊಲೀಸರು, ನಾರಾಯಣ ಅವರ ಸಹೋದರ ಕೃಷ್ಣಪ್ಪ ಅವರ ಸ್ಯಾಂಪಲ್ ಪಡೆದು ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾರೆ. ಜತೆಗೆ ನಾರಾಯಣ ಅವರು ಮೀನುಗಾರಿಕೆಗೆ ತೆರಳಿದ ಸಂದರ್ಭ ಬೋಟ್‌ನಲ್ಲಿ ಅವರೊಂದಿಗಿದ್ದ ಇತರ ಸಿಬ್ಬಂದಿಯನ್ನೂ ವಿಚಾರಣೆಗೊಳಪಡಿಸಲು ಮುಂದಾಗಿದ್ದಾರೆ.