ಹೆಮ್ಮಾಡಿ ಗ್ರಾಮ ಪಂಚಾಯಿತಿ ಗ್ರಾಮಸಭೆ ನಡೆಯಿತು. ಪ್ರಮುಖರಾದ ಭಾವನಾ, ಸತ್ಯನಾರಾಯಣ, ಹರೀಶ್, ಸುರೇಶ ಬಾಬು, ಪರಶುರಾಮ ಮತ್ತಿತರರಿದ್ದರು. 
ಉಡುಪಿ

ಶುದ್ಧ ಕುಡಿಯುವ ನೀರು ಪೂರೈಕೆ

ಇಂದಿರಾ ಎನ್ ಕೆ
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಅಪಾಯಕಾರಿ ಮರವನ್ನು ತೆರವುಗೊಳಿಸಬೇಕು, ಕುಡಿಯುವ ಶುದ್ಧ ನೀರನ್ನು ಸರಬರಾಜು ಮಾಡಬೇಕು, ಶಾಲೆಯ ಬಳಿ ನೇತಾಡುತ್ತಿರುವ ವಿದ್ಯುತ್ ತಂತಿಯನ್ನು ಸರಿಪಡಿಸಬೇಕು ಎಂದು ಹೆಮ್ಮಾಡಿ ಗ್ರಾಮಸ್ಥರು ಆಗ್ರಹಿಸಿದರು.
ಹೆಮ್ಮಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ನಡೆದ ಹೆಮ್ಮಾಡಿ ಗ್ರಾಪಂನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆ ಮತ್ತು ಮಹಿಳೆಯರ ವಿಶೇಷ ಗ್ರಾಮಸಭೆಯಲ್ಲಿ ಆಗ್ರಹ ಕೇಳಿಬಂತು.
ಗ್ರಾಪಂ ವ್ಯಾಪ್ತಿಯ ಬಹುತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೆಮ್ಮಾಡಿ ಗ್ರಾಮದ ಹಲವು ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಆಗುತ್ತಿಲ್ಲ. ಬೇಸಿಗೆಯಲ್ಲಿ ಜನರಿಗೆ ಸಮಸ್ಯೆ ಆಗದಂತೆ ಕುಡಿಯುವ ಶುದ್ಧ ನೀರು ಸರಬರಾಜು ವಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು. ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಬೇಸಿಗೆಯಲ್ಲಿ ಕುಡಿಯುವ ಶುದ್ಧ ನೀರು ನೀಡಲು ಕ್ರಮ ಕೈಗೊಳ್ಳುವುದಾಗಿ ಪಿಡಿಒ ಭಾವನಾ ಭರವಸೆ ನೀಡಿದರು.
ಹೆಮ್ಮಾಡಿ ದೇವಸ್ಥಾನದ ಸಮೀಪದಲ್ಲಿರುವ ಅಪಾಯಕಾರಿ ಮರ ತೆರವಿಗೆ ಅನೇಕ ಬಾರಿ ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸ್ಥಳೀಯಾಡಳಿತ ಈ ಬಗ್ಗೆ ಗಮನಹರಿಸಿ ಮರ ತೆರವಿಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಕರುಣಾಕರ ಪೈ ಆಗ್ರಹಿಸಿದರು.
ಸ್ಥಳೀಯ ಸರ್ಕಾರಿ ಶಾಲೆ ಬಳಿ ವಿದ್ಯುತ್ ತಂತಿ ನೇತಾಡುತ್ತಿದ್ದು, ಕೈಗೆಟಕುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ ತೆರವುಗೊಳಿಸಿ ಭೂಗತ ಕೇಬಲ್ ಅಳವಡಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಹೆಮ್ಮಾಡಿ ಗ್ರಾಮ ಆಡಳಿತಾಧಿಕಾರಿ ಹರೀಶ್, ಮೆಸ್ಕಾಂ ಜೆಇ ಸುರೇಶ ಬಾಬು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪರಶುರಾಮ, ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಪೈ, ಆರೋಗ್ಯ ಇಲಾಖೆಯ ಸಿಎಚ್‌ಒ ಸದಾನಂದ, ಅರಣ್ಯ ಇಲಾಖೆಯ ಎಚ್.ತಿಮ್ಮಪ್ಪ ಇಲಾಖಾ ಮಾಹಿತಿ ನೀಡಿದರು. ಗ್ರಾಪಂ ಸಿಬ್ಬಂದಿ ಪ್ರಭಾಕರ ಕಳೆದ ಸಾಲಿನ ವರದಿ ವಾಚಿಸಿದರು. ಕಾರ್ಯದರ್ಶಿ ಗಿರಿಜಾ ಜಮಾ ಖರ್ಚಿನ ವಿವರ ಮಂಡಿಸಿದರು.

ಸಮಸ್ಯೆಗಳ ಬಗ್ಗೆ ಇಲ್ಲ ಪ್ರಸ್ತಾಪ

ಮಹಿಳೆಯರ ವಿಶೇಷ ಗ್ರಾಮಸಭೆಯಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ ವಿಚಾರಗಳಾಗಲಿ, ಸಮಸ್ಯೆಗಳಾಗಲಿ ಪ್ರಸ್ತಾಪವಾಗದಿರುವುದು ವಿಶೇಷವಾಗಿತ್ತು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಂಬಂಧಪಟ್ಟ ಇಲಾಖೆಗಳಿಂದಲೂ ಯಾವುದೇ ಮಾಹಿತಿ ನೀಡಲಿಲ್ಲ.

ಗ್ರಾಪಂಗೆ ಲಿಖಿತ ಮನವಿ

ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗ್ರಾಪಂಗೆ ಲಿಖಿತ ಮನವಿ ನೀಡಬೇಕು. ಮನವಿ ನ್ಯಾಯಸಮ್ಮತವಾಗಿದ್ದಲ್ಲಿ ಗ್ರಾಪಂ ಕ್ರಿಯಾ ಯೋಜನೆಯಲ್ಲಿ ಕಾಮಗಾರಿಗಳನ್ನು ಸೇರಿಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಗ್ರಾಪಂ ಆಡಳಿತಾಧಿಕಾರಿ ಸತ್ಯನಾರಾಯಣ ತಿಳಿಸಿದರು.