ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಆಯೋಜಿಸಲಾದ ವಿಷಯವಾರು ಶಿಕ್ಷಕರ ತರಬೇತಿ ಕಾರ್ಯಾಗಾರ
ಕುಂದಾಪುರ: ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸರಿಯಾದ ಮತ್ತು ಸಮಗ್ರ ಮಾಹಿತಿ ಒದಗಿಸುವುದು ಶಿಕ್ಷಕರ ಕರ್ತವ್ಯ. ಕರ್ತವ್ಯನಿಷ್ಠೆಯುಳ್ಳ ಶಿಕ್ಷಕರಿಗೆ ತಮ್ಮ ಬೋಧನಾ ವಿಷಯದ ಕುರಿತು ಸಂಪೂರ್ಣ ಅರಿವು ಅಗತ್ಯ. ಇಂತಹ ಕಾರ್ಯಾಗಾರಗಳು ಶಿಕ್ಷಕರ ಜ್ಞಾನ ನವೀಕರಿಸುವುದರ ಜತೆಗೆ ಪರಿಣಾಮಕಾರಿ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಕಾರಿ ಎಂದು ಐಸಿಎಸ್‌ಸಿ ಪಠ್ಯಕ್ರಮದ ಶಾಲೆಗಳ ಒಕ್ಕೂಟದ ಸಂಯೋಜಕ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಶರಣ ಕುಮಾರ ಹೇಳಿದರು.
ಐಸಿಎಸ್‌ಸಿ ಪಠ್ಯಕ್ರಮದ ಶಾಲೆಗಳ ಒಕ್ಕೂಟದ ವತಿಯಿಂದ ಉಡುಪಿ, ದ.ಕ. ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಐಸಿಎಸ್‌ಸಿ ಶಾಲೆಗಳ ಶಿಕ್ಷಕರಿಗಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಆಯೋಜಿಸಲಾದ ವಿಷಯವಾರು ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಭೌತಶಾಸ್ತ್ರ ವಿಷಯದ ಕಾರ್ಯಾಗಾರದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಶಾಲಾ ಸಂಯೋಜಕಿ ಲತಾ ದೇವಾಡಿಗ, ಭೂಗೋಳಶಾಸ್ತ್ರ ಕಾರ್ಯಾಗಾರದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಶಾಲಾ ಸಂಯೋಜಕಿ ಸವಿತಾ ಭಟ್, ಕನ್ನಡ ಕಾರ್ಯಾಗಾರದಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಉಪಪ್ರಾಂಶುಪಾಲ ರಾಮ ದೇವಾಡಿಗ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವಿವಿಧ ಶಾಲೆಗಳ ವಿಷಯ ಶಿಕ್ಷಕರು ಭಾಗವಹಿಸಿದ್ದರು.