ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಕಿರಣ್ ಆಳ್ವ ಮಾತನಾಡಿದರು. ಸರಿತಾ ಶಿವಾನಂದ ಹಾಗೂ ನೀಲಕಂಠ ಮೇಸ್ತ ಇದ್ದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬಿಸಿಲ ಧಗೆ ನಡುವೆ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಉಪಾಧ್ಯಕ್ಷೆ ಸರಿತಾ ಶಿವಾನಂದ ಅಧ್ಯಕ್ಷತೆಯಲ್ಲಿ ಶುಕ್ರವಾರ ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ನೀರಿನ ವಿಚಾರ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಕೋಲಾಹಲವನ್ನೇ ಸೃಷ್ಟಿಸಿತು.
ಫೆಬ್ರವರಿಯಿಂದ ನೀರು ರೇಷನಿಂಗ್ ಮಾಡುತ್ತಿದ್ದರೂ ನೀರು ಕುಡಿಯಲು ಯೋಗ್ಯವಾಗಿಲ್ಲ, ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂದು ಸದಸ್ಯರಾದ ಶೋಭಾ, ಸತೀಶ್ಚಂದ್ರ ಹಾಗೂ ಮಹಮ್ಮದ್ ಆಸಿಫ್ ದೂರಿದರು. ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಪ್ರತಿಕ್ರಿಯಿಸಿ, ನೀರಿನ ಗುಣಮಟ್ಟ ಪರಿಶೀಲನೆ ನಡೆಸಿ ಪೂರೈಕೆ ಮಾಡಲಾಗುತ್ತಿದೆ ಎಂದರು. ಆದರೆ ಕೆಲವು ಮನೆಮಂದಿ ಸ್ವತಃ ಪರೀಕ್ಷೆ ನಡೆಸಿ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿ ಪಡೆದಿರುವುದಾಗಿ ಸದಸ್ಯರು ತಿಳಿಸಿದರು.
ಸಮಸ್ಯೆ ಇರುವ ಪ್ರದೇಶಗಳಲ್ಲಿ ನೀರನ್ನು ಮರುಪರಿಶೀಲನೆಗೆ ಒಳಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸ್ಥಾಯಿ ಸಮಿತಿ ಹಾಲಿ ಅಧ್ಯಕ್ಷ ಕಿರಣ್ ಆಳ್ವ ಮತ್ತು ಸದಸ್ಯ ಅನಿಲ್ ಕುಮಾರ್ ವಾಗ್ವಾದ ನಡೆಸಿ ಸದಸ್ಯರ ಅಸಮಾಧಾನಕ್ಕೆ ಕಾರಣರಾದರು.
57.02 ಕೋಟಿ ರೂ. ವೆಚ್ಚದಲ್ಲಿ ಕುರ್ಕಾಲು ಹೊಳೆಯಿಂದ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದ್ದು, ಕುರ್ಕಾಲು ಪರಿಸರದ ಏಳು ಗ್ರಾಮಗಳು ಹಾಗೂ ಕಾಪು ಪುರಸಭೆಗೆ ನೀರು ಪೂರೈಕೆ ಮಾಡುವ ಉದ್ದೇಶ ಹೊಂದಿದೆ. ನಾಲ್ಕು ಕಡೆ ನೀರಿನ ಟ್ಯಾಂಕ್‌ಗಳನ್ನೂ ನಿರ್ಮಿಸಲಾಗಿದೆ. ಅಮೃತ್ ಯೋಜನೆ, ಪೈಪ್‌ಲೈನ್ ಸೇರಿ ಒಟ್ಟು 80 ಕೋಟಿ ರೂ. ವೆಚ್ಚದ ಯೋಜನೆ ಹಳ್ಳ ಹಿಡಿದಿದೆಯೇ ಎಂದು ಸದಸ್ಯ ಅರುಣ್ ಶೆಟ್ಟಿ ಪಾದೂರು ಪ್ರಶ್ನಿಸಿದರು. ಈ ಬಗ್ಗೆ ಸಮಿತಿ ರಚಿಸಿ ಸಾಧಕ ಬಾಧಕ ಚರ್ಚಿಸಿ ಪರಿಶೀಲನೆ ಬಳಿಕವೇ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಪುರಸಭೆಗೆ ಹಸ್ತಾಂತರ ಮಾಡುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.
ಅಧಿಕಾರಿಗಳ ಗೈರಿಗೆ ಅಸಮಾಧಾನ
ಇಲಾಖಾ ಅಧಿಕಾರಿಗಳ ಗೈರಿಗೆ ಅಸಮಾಧಾನ ವ್ಯಕ್ತವಾಯಿತು. ಮುಖ್ಯಾಧಿಕಾರಿ ಸಮಜಾಯಿಷಿ ನೀಡಿ, ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮುಚಿತವಾಗಿ ಮಾಹಿತಿ ನೀಡಲಾಗಿದೆ. ಇದರ ಹೊರತಾಗಿ ಅಧಿಕಾರಿಗಳು ಗೈರಾಗಿರುವ ಬಗ್ಗೆ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಶೇ.3 ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಹಮತ
ಆಸ್ತಿ ತೆರಿಗೆ ಹೆಚ್ಚಳ ವಿಚಾರದಲ್ಲಿ ಶೇ.5 ಏರಿಕೆ ಪ್ರಸ್ತಾಪ ಮಂಡಿಸಲಾಯಿತಾದರೂ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು. ಕೆಲವು ಸ್ಥಳಗಳಲ್ಲಿ ಒಂದು ಡೋರ್ ನಂಬರ್‌ನಲ್ಲಿ ಅನೇಕ ಮನೆಗಳು ಇರುವುದರಿಂದ ಪುರಸಭೆಗೆ ಆದಾಯ ನಷ್ಟವಾಗುತ್ತಿದೆ ಎಂದರು. ಚರ್ಚೆ ಬಳಿಕ ಅಂತಿಮವಾಗಿ ಶೇ.3 ತೆರಿಗೆ ಏರಿಕೆಗೆ ಕೌನ್ಸಿಲ್ ಸಹಮತ ವ್ಯಕ್ತಪಡಿಸಿತು.
ಆರೋಗ್ಯ ನಿರೀಕ್ಷಕರ ವಿರುದ್ಧ ಗರಂ
ಪುರಸಭೆ ಆರೋಗ್ಯ ವಿಭಾಗಕ್ಕೆ ಸಂಬಂಧಿಸಿ ಸಾಕಷ್ಟು ದೂರುಗಳು ನೀಡಿದರೂ ಕ್ರಮ ವಹಿಸದಿರುವ ಬಗ್ಗೆ ಸದಸ್ಯರು ದೂರಿದರು. ಈ ವೇಳೆ ಆರೋಗ್ಯ ನಿರೀಕ್ಷಕರ ಕರ್ತವ್ಯ ನಿರ್ಲಕ್ಷೃದ ಬಗ್ಗೆ ಮುಖ್ಯಾಧಿಕಾರಿ ಗರಂ ಆಗಿ, ಕೆಲಸ ಸರಿಯಾಗಿ ಮಾಡದಿದ್ದರೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.
ಗೂಡು ನಿರ್ಮಾಣ ಟೆಂಡರ್‌ಗೆ ಒಪ್ಪಿಗೆ
ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲು ನಾಲ್ಕು ಬಾರಿ ಟೆಂಡರ್ ಕರೆಯಲಾಗಿದ್ದರೂ ಯಾರೂ ಮುಂದಾಗಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು. ನಾಯಿಗಳ ಸಂತಾನಶಕ್ತಿ ಹರಣಕ್ಕಾಗಿ ಅಗತ್ಯವಿರುವ ಗೂಡು ನಿರ್ಮಾಣಕ್ಕೆ ಟೆಂಡರ್ ಕರೆಯಲು ಒಪ್ಪಿಗೆ ಸೂಚಿಸಲಾಯಿತು.