ಸುಳ್ಯ ತಾಲೂಕು ಪಶು ವೈದ್ಯಕೀಯ ಆಸ್ಪತ್ರೆ.
ಸಿಬ್ಬಂದಿ ಕೊರತೆಯಿಂದ ಹಲವು ವರ್ಷಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಸುಳ್ಯದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಪಶು ವೈದ್ಯರು ಮತ್ತು ಸಿಬ್ಬಂದಿಗಳ ಕೊರತೆಯಿಂದ ಹೈನುಗಾರರಿಗೆ ವಿಪರೀತ ಸಮಸ್ಯೆಯಾಗುತ್ತಿದೆ. ತಾಲೂಕಿನಲ್ಲಿ ಅಡಿಕೆ ಕೃಷಿಗೆ ಕಾಡುತ್ತಿರುವ ವಿವಿಧ ರೋಗಗಳ ಪರಿಣಾಮವಾಗಿ ಹೆಚ್ಚಿನ ರೈತರು ಪಶುಸಂಗೋಪನೆ ಮತ್ತು ಕೋಳಿ ಸಾಕಾಣಿಕೆಯ ಕಡೆಗೆ ಒಲವು ತೋರಿಸುತ್ತಿದ್ದಾರೆ. ಆದರೆ ಈ ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ಮತ್ತು ಸರ್ಕಾರದ ಸೌಲಭ್ಯಗಳನ್ನು ಕಾಲಕಾಲಕ್ಕೆ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಪಶುಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯರಿಂದ ಹಿಡಿದು ಡಿದರ್ಜೆ ನೌಕರರವರೆಗೂ ಕೂಡ ಹುದ್ದೆಗಳು ಖಾಲಿ ಇದ್ದು ಇಲಾಖೆಯ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಸಮಸ್ಯೆಯಾಗುತ್ತಿದೆ.
ಸುಳ್ಯ ತಾಲೂಕು ಪಶು ವೈದ್ಯಕೀಯ ಇಲಾಖೆಯಲ್ಲಿ ಒಟ್ಟು 53 ಹುದ್ದೆಗಳು ಮಂಜೂರಾಗಿದ್ದು ಇದರಲ್ಲಿ 4 ಜನ ಪಶು ವೈದ್ಯರು ಮತ್ತು 1 ವಾಹನ ಚಾಲಕ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲ 48 ಹುದ್ದೆಗಳು ಖಾಲಿ ಇವೆ. ತಾಲೂಕಿನಲ್ಲಿ ಇತ್ತೀಚಿನ ಗಣತಿಯ ಪ್ರಕಾರ 20,300 ಹಸುಗಳು, 43 ಎಮ್ಮೆಗಳು, 2,700 ಮೇಕೆಗಳು, 15 ಕುರಿಗಳು, 1,150 ಹಂದಿಗಳು, 20,000ಕ್ಕೂ ಮೇಲ್ಪಟ್ಟು ನಾಯಿಗಳು, 4,17,000 ಕೋಳಿಗಳು ಮತ್ತು ಇತರ ಜಾನುವಾರುಗಳು ಹೀಗೆ ಒಟ್ಟಾರೆ ಸುಮಾರು 4.5 ಲಕ್ಷಕ್ಕೂ ಹೆಚ್ಚಿನ ಜಾನುವಾರುಗಳ ಆರೋಗ್ಯ ಪಾಲನೆಯ ಜವಾಬ್ದಾರಿ ಲಭ್ಯವಿರುವ ಈ 4 ಜನ ಪಶು ವೈದ್ಯರ ಮೇಲೆಯೇ ಇದೆ.
ರೈತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಿಂದ ಸ್ಥಾಪಿಸಲಾಗಿರುವ ಪಶುಸಂಗೋಪನೆ ಇಲಾಖೆಯಲ್ಲಿ ಮುಖ್ಯವಾಗಿ ಬೇಕಾದ ಸಹಾಯಕ ನಿರ್ದೇಶಕರ ಹುದ್ದೆಯೇ ಖಾಲಿ ಇದ್ದು ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯರಿಗೆ ಕನಿಷ್ಠ ಎರಡೆರಡು ಸಂಸ್ಥೆಗಳ ಹೆಚ್ಚುವರಿ ಕರ್ತವ್ಯ ವಹಿಸಲಾಗಿದೆ.
48 ಹುದ್ದೆಗಳು ಖಾಲಿ: ಸುಳ್ಯದಲ್ಲಿ ತಾಲೂಕುಮಟ್ಟದ ಪಶುವೈದ್ಯಕೀಯ ಆಸ್ಪತ್ರೆ, ಪಂಜದಲ್ಲಿ ಹೋಬಳಿಮಟ್ಟದ ಪಶು ವೈದ್ಯಕೀಯ ಆಸ್ಪತ್ರೆ, ಅರಂತೋಡು, ಬೆಳ್ಳಾರೆ, ಕಳಂಜ ಮತ್ತು ಗುತ್ತಿಗಾರಿನಲ್ಲಿ ಪಶು ಚಿಕಿತ್ಸಾಲಯಗಳು ಹೀಗೆ ವೈದ್ಯರೇ ಮುಖ್ಯಸ್ಥರಾಗಿರುವ ಆರು ಸಂಸ್ಥೆಗಳಿದ್ದು, ಮಂಡೆಕೋಲು, ಮರ್ಕಂಜ, ಕುಕ್ಕುಜಡ್ಕ, ಕಲ್ಮಡ್ಕ, ಕೊಡಿಯಾಲ ಮತ್ತು ಕೊಲ್ಲಮೊಗ್ರಿನಲ್ಲಿ ಪಶು ವೈದ್ಯಕೀಯ ಪರೀಕ್ಷಕರು ಮುಖ್ಯಸ್ಥರಾಗಿರಬೇಕಾದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಇವೆ. ಈ ಎಲ್ಲ ಸಂಸ್ಥೆಗಳ ಪೈಕಿ ಸುಳ್ಯ, ಬೆಳ್ಳಾರೆ, ಗುತ್ತಿಗಾರು ಮತ್ತು ಕಳಂಜದಲ್ಲಿ ತಲಾ ಒಬ್ಬರು ಪಶು ವೈದ್ಯರು ಮತ್ತು ಪಶು ಆಸ್ಪತ್ರೆ ಸುಳ್ಯದಲ್ಲಿ ಒಬ್ಬರು ವಾಹನ ಚಾಲಕರ ಹುದ್ದೆ ಮಾತ್ರ ನೇಮಕವಾಗಿದ್ದು ಉಳಿದ ಎಲ್ಲ 48 ಹುದ್ದೆಗಳು ಖಾಲಿ ಇವೆ.
ತೀವ್ರ ಸಿಬ್ಬಂದಿ ಕೊರತೆಯ ಹೊರತಾಗಿಯೂ ಸುಳ್ಯದ ಪಶು ವೈದ್ಯಕೀಯ ಇಲಾಖೆಯು ರೈತರಿಗೆ ಉತ್ತಮ ಸೇವೆ ನೀಡುತಿದೆ. ಪ್ರಾಣಿಗಳ ಮೇಜರ್ ಮತ್ತು ಮೈನರ್ ಸರ್ಜರಿಗಳು ಸುಳ್ಯದ ಪಶು ಆಸ್ಪತ್ರೆಯಲ್ಲಿ ನಿರಂತರವಾಗಿ ನಡೆಯುತ್ತಿರುವುದು ಇಲ್ಲಿನ ವೈದ್ಯರ ಸೇವಾತತ್ಪರತೆಗೆ ಸಾಕ್ಷಿಯಾಗಿದೆ.
ಸಂಚಾರಿ ಪಶು ಚಿಕಿತ್ಸಾ ಘಟಕ ಸ್ತಬ್ಧ
ತಾಲೂಕು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರ ಹುದ್ದೆಯ ಮತ್ತು ಪಶು ಚಿಕಿತ್ಸಾಲಯ ಅರಂತೋಡು ಸಂಸ್ಥೆಯ ಪ್ರಭಾರಗಳನ್ನು ಡಾ.ನಿತಿನ್ ಪ್ರಭು ಅವರಿಗೆ ಪಶು ಆಸ್ಪತ್ರೆ ಸುಳ್ಯದ ಚಿಕಿತ್ಸಾ ವಿಭಾಗದ ಅವರ ಮೂಲ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ. ತಾಲೂಕು ವಿಸ್ತರಣಾಧಿಕಾರಿಯ ಹೆಚ್ಚುವರಿ ಪ್ರಭಾರವನ್ನು ಕಳಂಜದ ಪಶು ವೈದ್ಯಾಧಿಕಾರಿ ಡಾ.ಮೇಘಶ್ರೀ ಅವರಿಗೆ ವಹಿಸಲಾಗಿದೆ. ಪಂಜ ಪಶು ಆಸ್ಪತ್ರೆಯ ಹೆಚ್ಚುವರಿ ಪ್ರಭಾರವನ್ನು ಬೆಳ್ಳಾರೆಯ ಪಶುವೈದ್ಯಾಧಿಕಾರಿ ಡಾ.ಸೂರ್ಯನಾರಾಯಣ ಅವರಿಗೆ ವಹಿಸಲಾಗಿದೆ. ಸಿಬ್ಬಂದಿ ಕೊರತೆಯಿಂದ ವಾರದಲ್ಲಿ ಮೂರು ದಿನ ಚಲಿಸುತ್ತಿದ್ದ ಸಂಚಾರಿ ಪಶು ಚಿಕಿತ್ಸಾ ಘಟಕ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
ಮನೆಮನೆ ಲಸಿಕೆ ವಿತರಣೆಗೆ ಸಮಸ್ಯೆ
ತಾಲೂಕು ಪಶು ವೈದ್ಯಕೀಯ ಆಸ್ಪತ್ರೆಯಲ್ಲಂತೂ ಪ್ರತಿದಿನ ಸುಮಾರು 65ರಿಂದ 80 ವಿವಿಧ ಜಾನುವಾರುಗಳು ಚಿಕಿತ್ಸೆಗಾಗಿ ಹಾಜರಾಗುತ್ತಿದ್ದು ಲಭ್ಯವಿರುವ ಒಬ್ಬ ವೈದ್ಯರೇ ಈ ಎಲ್ಲ ಚಿಕಿತ್ಸೆಗಳನ್ನು ನಿರ್ವಹಿಸಬೇಕಾಗಿದೆ. ಕಾಲುಬಾಯಿ ಜ್ವರ, ಚರ್ಮಗಂಟು ರೋಗ, ಕುರಿ ಮತ್ತು ಮೇಕೆಗಳಲ್ಲಿ ಸಿಡುಬು, ಹಂದಿಗಳಲ್ಲಿ ಹಂದಿ ಜ್ವರ, ಕೋಳಿಗಳಲ್ಲಿ ಕೊಕ್ಕರೆ ರೋಗ ಮತ್ತು ನಾಯಿಗಳಲ್ಲಿ ಹುಚ್ಚುನಾಯಿ ರೋಗ ಮುಂತಾದ ರೋಗಗಳಿಗೆ ವರ್ಷಪೂರ್ತಿ ವಿವಿಧ ಹಂತಗಳಲ್ಲಿ ಲಸಿಕಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಸಿಬ್ಬಂದಿ ಕೊರತೆಯಿಂದ ಹಸು, ಎಮ್ಮೆಗಳಿಗೆ ಮನೆ-ಮನೆ ಭೇಟಿ ನೀಡಿ ಲಸಿಕೆ ನೀಡುವುದು ಕಷ್ಟವಾಗಿದೆಯ