ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅತ್ತೂರಿನಲ್ಲಿ ಅತಿಯಾದ ಮದ್ಯಪಾನದ ಚಟದಿಂದ ಬೇಸತ್ತು ವೃದ್ಧರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೂಪದಕಟ್ಟೆ ಅತ್ತೂರು, ಪೊಟ್ಟಕ್ಯಾರ್ ದರ್ಕಾಸು ಮನೆ ನಿವಾಸಿ ನಾರಾಯಣ ಜೆ.ಪೂಜಾರಿ(72) ಆತ್ಮಹತ್ಯೆ ಮಾಡಿಕೊಂಡವರು.
ವಿಪರೀತ ಮದ್ಯಪಾನದ ಚಟ ಹೊಂದಿದ್ದು, ಪ್ರತಿ ದಿನ ರಾತ್ರಿ ಮನೆಯ ಹಾಲ್‌ನಲ್ಲಿ ಮಲಗುತ್ತಿದ್ದರು. ಬೆಳಗ್ಗೆ 7ರ ಸುಮಾರಿಗೆ ಹಾಲ್‌ನಿಂದ ಎದ್ದು ಕೋಣೆಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ಎಂದಿನಂತೆ ಭಾನುವಾರ ಬೆಳಗ್ಗೆ 7 ಗಂಟೆಗೆ ಹಾಲ್‌ನಿಂದ ಕೋಣೆಗೆ ತೆರಳಿದ್ದರು. ನಂತರ ಬೆಳಗ್ಗೆ 9.30ರ ಸುಮಾರಿಗೆ ಮನೆಯವರು ಹೋಗಿ ನೋಡಿದಾಗ, ಅವರು ಕೋಣೆಯ ಕಬ್ಬಿಣದ ಪಕ್ಕಾಸಿಗೆ ಮಕ್ಕಳ ತೊಟ್ಟಿಲು ಕಟ್ಟುವ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ಅವರ ಪುತ್ರ ಶ್ರೀಕಾಂತ್ ಪೂಜಾರಿ ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.