ಭಗವದ್ಗೀತೆಯ ಸಾರದಂತೆ ಕಾಯಕ, ಕರ್ತವ್ಯ, ಶ್ರಮ ಸಂಸ್ಕೃತಿಗೆ ಪ್ರತೀಕರಾದ ವಿಆರ್ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಡಾ. ವಿಜಯ ಸಂಕೇಶ್ವರ ಅವರಿಗೆ ಪರ್ಯಾಯ ಸುಗುಣೇಂದ್ರ ಶ್ರೀಗಳು "ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು. ಮಂತ್ರಾಲಯದ ಸುಬುಧೇಂದ್ರ ಶ್ರೀ. ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಶ್ರೀ, ಅದಮಾರು ಮಠದ ವಿಶ್ವಪ್ರಿಯ ಶ್ರೀ, ಪುತ್ತಿಗೆ ಸುಶ್ರೀಂದ್ರ ಶ್ರೀ ಇದ್ದರು.
* ವಿಆರ್ಎಲ್ ಸಮೂಹ ಸಂಸ್ಥೆಗಳ ಸಿಎಂಡಿ ಡಾ. ವಿಜಯ ಸಂಕೇಶ್ವರ ಮೆಚ್ಚುಗೆ
* ಪರ್ಯಾಯ ಪುತ್ತಿಗೆ ಮಠದಿಂದ 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ಪ್ರದಾನ
ಉಡುಪಿ: ನಮ್ಮ ಭಾರತ ದೇಶದ ಆಚೆಗೆ ಎಲ್ಲಿಯೂ ಹಿಂದು ಧರ್ಮದ ಪ್ರಸಾರ ಆಗಿರಲಿಲ್ಲ. 150 ವರ್ಷದ ಹಿಂದೆ ಸ್ವಾಮಿ ವಿವೇಕಾನಂದರು ಅಮೆರಿಕದ ಶಿಕಾಗೋದಲ್ಲಿ ಹಿಂದು ಧರ್ಮದ ಮಹತ್ವವನ್ನು ಪ್ರಸಾರ ಮಾಡಿದ್ದರು. ವಿವೇಕರು ಹಾಕಿಕೊಟ್ಟ ಮಾರ್ಗದಂತೆಯೇ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಅಮೆರಿಕದಲ್ಲಿ 11 ಕೃಷ್ಣ ಮಠ, ಆಸ್ಟ್ರೆಲಿಯಾದಲ್ಲಿ 2, ಲಂಡನ್ ಹಾಗೂ ಕೆನಡಾದಲ್ಲಿ 1 ಸೇರಿ ಒಟ್ಟು 15 ಮಂದಿರ ನಿರ್ಮಿಸಿದ್ದಾರೆ. ಅನೇಕ ಧಾರ್ಮಿಕ ಚೌಕಟ್ಟಿನ ನಡುವೆಯೂ ಹಿಂದು ಧರ್ಮದ ಹಾಗೂ ಭಗವದ್ಗೀತೆಯ ಪ್ರಸಾರ ಮಾಡುತ್ತಿದ್ದಾರೆ ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯ ಸಂಕೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಸ್ವರ್ಣ ಲೇಪಿತ 'ಪಾರ್ಥ ಸಾರಥಿ' ರಥದ ಪ್ರಥಮ ರಥೋತ್ಸವದ ನಿಮಿತ್ತ ಉಡುಪಿಯ ಮಧ್ವಬೀದಿಯಲ್ಲಿ ಶನಿವಾರ (ಡಿ.27) ಸಂಜೆ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಸುಗುಣೇಂದ್ರ ಶ್ರೀಗಳಿಂದ 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ವಿಶಿಷ್ಟ ಪರ್ಯಾಯ
ಜಗತ್ವ್ಯಾಪಿಯಾದ ಶ್ರೀಕೃಷ್ಣನು ಭಗವಂತನಾದ ಶ್ರೀಮನ್ನಾರಾಯಣನ ಅವತಾರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. 800 ವರ್ಷದ ಹಿಂದೆ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿ, ಅಷ್ಟಮಠಗಳಿಗೆ ದ್ವೈವಾರ್ಷಿಕ ಪೂಜಾ ಸೇವೆಯ ವಿಶಿಷ್ಟ ಪರ್ಯಾಯ ಸಂಪ್ರದಾಯ ರೂಢಿಸಿದ್ದಾರೆ. ಎಲ್ಲ ಅಷ್ಟಮಠಗಳ ಯತಿಗಳು ಕೃಷ್ಣನ ಆರಾಧನೆಯ ಮೂಲಕ ಭಕ್ತರಿಗೆ ಕೃಷ್ಣಪ್ರಜ್ಞೆಯನ್ನು ಮೂಡಿಸುತ್ತಿದ್ದಾರೆ ಎಂದರು.
ಧರ್ಮ ಪ್ರಸಾರಕ್ಕೆ ತಂತ್ರಜ್ಞಾನ
ವಾರಣಾಸಿಯಲ್ಲಿ ಭಕ್ತರಿಗೆ ಯಾವುದೇ ಸೌಲಭ್ಯ ಇರಲಿಲ್ಲ. ಸಮಸ್ಯೆ ಇತ್ತು. ಆಧ್ಯಾತ್ಮಿಕ ಚಿಂತನೆಯುಳ್ಳ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಅಲ್ಲಿ ಸುವ್ಯವಸ್ಥಿತ ಮಂದಿರ ನಿರ್ಮಿಸಿ ಪ್ರವಾಸಿಗರ ಸಕಲ ಸೌಲಭ್ಯ ಒದಗಿಸಿದ್ದಾರೆ. ಇದೀಗ ಅಲ್ಲಿ ಭಕ್ತರ ಸಂಖ್ಯೆದಿನೇದಿನೆ ಹೆಚ್ಚುತ್ತಿದೆ. ಶೇ.50 ಭಕ್ತರು ಹುಬಳ್ಳಿಯಿಂದಲೇ ತೆರಳುತ್ತಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಅವರ ಬದಲಾಗಿ ಬೇರೆ ಯಾರೆ ಸಿಎಂ ಆಗಿದ್ದರೂ ಮಹಾಕುಂಭಮೇಳ ಯಶ ಕಾಣುತ್ತಿರಲಿಲ್ಲ. ಅವರ ದೂರದೃಷ್ಟಿಯಿಂದಾಗಿ ಮಹಾಸಂಗಮದಲ್ಲಿ 68 ಕೋಟಿ ಜನರು ಪವಿತ್ರ ಸ್ನಾನ ಮಾಡಲು ಸಾಧ್ಯವಾಯಿತು. ಜೈನ ಧರ್ಮದಲ್ಲಿಯೂ ಸಹ ಉನ್ನತ ವ್ಯಾಸಂಗ ಮಾಡಿದವರು ದೀಕ್ಷೆ ಪಡೆದು ಅವರ ಧರ್ಮ ಪ್ರಸಾರ ಮಾಡುತ್ತಾರೆ. ಇದೀಗ ಆಧುನಿಕ ತಂತ್ರಜ್ಞಾನ ಯುಗದಲ್ಲಿರುವ ನಾವು ಹಿಂದು ಧರ್ಮವನ್ನು ಹಾಗೂ ಕೃಷ್ಣನ ಸಂದೇಶ ಇನ್ನೂ ಬೆಳೆಸಬೇಕು ಎಂದರು.
ಗೀತೆಯ ಸಾರ ಅನುಸರಿಸೋಣ
ದಕ್ಷಿಣ ಕನ್ನಡ ಜಿಲ್ಲೆಯ ಭಾಗವನ್ನು ಕೂಲಂಕುಷವಾಗಿ ನೋಡಿದಾಗ ಇಲ್ಲಿನ ಎಲ್ಲ ಧರ್ಮದವರಿಗೂ ಆಸಕ್ತಿ, ಜಾಗೃತಿ ಇದೆ. ಇಲ್ಲಿನ ಜನರು ಶ್ರೀಗಳಿಗೆ ತಮ್ಮ ಕೈಲಾದ ಸೇವೆ ಮಾಡುತ್ತಾರೆ. ಉಡುಪಿಯಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಿದ್ದು ಅವರಿಗೆ ಸರಳವಾಗಿ ಹಾಗೂ ಸುಲಭವಾಗಿ ಕೃಷ್ಣನ ದರ್ಶನಕ್ಕೆ ಅನುಕೂಲ ಆಗುವಂತೆ ವ್ಯವಸ್ಥೆ ಕಲ್ಪಿಸಲು ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇದು ನನ್ನ ವೈಯಕ್ತಿಕ ನಿಲುವು ಎಂದರು. ಪಾರ್ಥ ಸಾರಥಿಯ ಪ್ರಥಮ ರಥೋತ್ಸವದಲ್ಲಿ ನಾನು ಪಾಲ್ಗೊಂಡಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಪ್ರಧಾನಿ ಮೋದಿ ಅವರು ಇತ್ತೀಚೆಗೆ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆ ಕೊಟ್ಟಿರುವುದನ್ನು ಕಂಡು ಬಹಳ ಸಂತಸವಾಯಿತು. ಶ್ರೀಗಳ ಆಶಯದಂತೆ ಎಲ್ಲ ಮನೆಯಲ್ಲೂ ಭಗವದ್ಗೀತೆಯನ್ನು ಇಟ್ಟುಕೊಂಡು, ಗೀತೆಯ ಸಾರ ಅನುಸರಣೆ ಮಾಡೋಣ ಎಂದು ವಿಜಯ ಸಂಕೇಶ್ವರ ಆಶಿಸಿದರು.
ಉಡುಪಿ ಕಾರಿಡಾರ್ಗೆ ಪಿಎಂ ಮೋದಿಗೆ ಪ್ರಸ್ತಾವನೆ
ವಿಜಯ ಸಂಕೇಶ್ವರರು ಸೂಚಿಸಿದಂತೆ ಉಡುಪಿಗೆ ಬರುವ ಭಕ್ತರಿಗೆ ದೇವರ ದರ್ಶನಕ್ಕೆ ಸೂಕ್ತ ಸೌಲಭ್ಯ ಒದಗಿಸಲು ಚಿಂತನೆ ಮಾಡಿದ್ದೇವೆ ಎಂದು ಸುಗುಣೇಂದ್ರ ಶ್ರೀ ಪ್ರತಿಕ್ರಿಯಿಸಿದರು. ವಾರಣಾಸಿ ಕಾರಿಡಾರ್ನಂತೆ ಉಡುಪಿ ಕಾರಿಡಾರ್ಗೆ ಯೋಜನೆ ರೂಪಿಸುವಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದಕ್ಕೆ ಮೋದಿ ಅವರು ಸಹ ವಿಶೇಷ ಆಸಕ್ತಿ ತೋರಿಸಿದ್ದಾರೆ. ಉತ್ತರ ಭಾರತವಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಉತ್ಸುಕನಾಗಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಸಂಕೇಶ್ವರರ ಆಶಯದಂತೆ ಆ ಕಾರ್ಯ ಶೀಘ್ರವಾಗಿ ಆಗಲೆಂದು ಆಶಿಸುವುದಾಗಿ ಶ್ರೀಗಳು ಹೇಳಿದರು.