ಉಡುಪಿಯ ಗೀತಾಮಂದಿರದಲ್ಲಿ ಮೊಬೈಲ್ ವರ್ಜನ ಶಿಬಿರಕ್ಕೆ ಸುಗುಣೇಂದ್ರ ಶ್ರೀ ಚಾಲನೆ ನೀಡಿದರು. ಡಾ. ವ್ಯಾಸರಾಜ ತಂತ್ರಿ, ಭವರಲಾಲ್ ಆರ್ಯ, ಡಾ. ರಾಮನಾಥ ಆಚಾರ್ಯ, ಸಂತೋಷ್ ಶೆಟ್ಟಿ ಮುಲುಂದ್, ಡಾ. ಸುಧೀರರಾಜ್ ನಿಟ್ಟೆ, ನಾಗರಾಜ್ ಆಚಾರ್ಯ, ಕೆ.ವಿ. ರಮಣ ಆಚಾರ್ಯ, ಶಿಬಿರಾರ್ಥಿಗಳು ಇದ್ದರು.
* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
* ಗೀತಾಮಂದಿರದಲ್ಲಿ ಮೊಬೈಲ್ ವರ್ಜನ ಶಿಬಿರಕ್ಕೆ ಚಾಲನೆ
ಉಡುಪಿ: ತಮ್ಮ ಮಕ್ಕಳು ಮೊಬೈಲ್ ವ್ಯಸನಿಗಳಾಗಿದ್ದನ್ನು ಕಂಡು ಅನೇಕ ಪಾಲಕರು ದು:ಖಿತರಾಗಿದ್ದಾರಲ್ಲದೆ ಆತಂಕಗೊಂಡಿದ್ದಾರೆ. ಹೀಗಾಗಿ ಮಕ್ಕಳನ್ನು ಮೊಬೈಲ್ ಚಟದಿಂದ ಪರಿತ್ಯಾಗ ಮಾಡಿಸಬೇಕಿದೆ. ಮೊಬೈಲ್ ಕೈಯಲ್ಲಿ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿವಾರಿಸಬೇಕಿದೆ. ಮೊಬೈಲ್ ದಾಸ್ಯತ್ವದಿಂದ ಮುಕ್ತಿ ಕೊಡಿಸಿವುದೇ ನಾವು ಆಯೋಜಿಸಿರುವ ಮೊಬೈಲ್ ವರ್ಜನ ಶಿಬಿರದ ಮುಖ್ಯ ಉದ್ದೇಶ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಗೀತಾಮಂದಿರದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಹಾಗೂ ಮಣಿಪಾಲದ ಕೆಎಂಸಿಯ ಮನೋಚಿಕಿತ್ಸಾ ವಿಭಾಗ ಮತ್ತು ಉಡುಪಿಯ ಪತಂಜಲಿ ಯೋಗ ಸಮಿತಿಗಳ ಸಹಯೋಗದೊಂದಿಗೆ ಮೇ 14ರಿಂದ 17ರ ವರೆಗೆ ಹಿರಿಯಡ್ಕದ ಪುತ್ತಿಗೆ ಮೂಲಮಠದಲ್ಲಿ ನಡೆಯಲಿರುವ ಶಿಬಿರಕ್ಕೆ ಗುರುವಾರ (ಮೇ 14) ಚಾಲನೆ ನೀಡಿ ಆಶೀರ್ವಚನ ನೀಡಿದರು.
ಮೊಬೈಲ್ ಹೊಂದಿರುವುದು ಮತ್ತು ಮೊಬೈಲ್ ಇಲ್ಲದಿದ್ದರೆ ಜೀವನವೇ ಇಲ್ಲ ಎಂಬ ಮನೋಸ್ಥಿತಿ ಇಂದಿನ ಬಹುತೇಕ ಮಕ್ಕಳಲ್ಲಿದೆ. ಹೀಗಾಗಿ ರಾಜ್ಯ ಸರ್ಕಾರವೂ ಸಹ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಅದನ್ನು ನಾವು ಬೆಂಬಲಿಸುತ್ತೇವೆ. ಸಮಾಜವೂ ಸಹಮತ ವ್ಯಕ್ತಪಡಿಸಬೇಕು. ಸರ್ಕಾರದ ನಿರ್ಧಾರ ಪ್ರೋತ್ಸಾಹಿಸಲು ಆತ್ಮ ಸಂಯಮ ಯೋಗ ಬೋಧಿಸಿದ ಶ್ರೀಕೃಷ್ಣನ ಕ್ಷೇತ್ರದಿಂದಲೇ ಮೊಬೈಲ್ ಸಂಯಮ ಯೋಗ ಆರಂಭಿಸಿದ್ದೇವೆ ಎಂದರು.
ವೇದಿಕೆಯಲ್ಲಿ ಸಹಯೋಗ ನೀಡಿದ ಗಾಂಧಿ ಆಸ್ಪತ್ರೆಯ ಡಾ. ವ್ಯಾಸರಾಜ ತಂತ್ರಿ, ಪತಂಜಲಿ ಯೋಗ ಸಮಿತಿಯ ಯೋಗಾಚಾರ್ಯ ಭವರಲಾಲ್ ಆರ್ಯ, ಮಹಾಮಹೋಪಾಧ್ಯಾಯ ಶತಾವಧಾನಿ ಡಾ. ರಾಮನಾಥ ಆಚಾರ್ಯ ಉಡುಪಿ, ಮುಂಬಯಿ ಉದ್ಯಮಿ ಸಂತೋಷ್ ಶೆಟ್ಟಿ ಮುಲುಂದ್, ಸಂಪನ್ಮೂಲ ವ್ಯಕ್ತಿ ಡಾ. ಸುಧೀರರಾಜ್ ನಿಟ್ಟೆ ಉಪಸ್ಥಿತರಿದ್ದರು.
ಶ್ರೀಮಠದ ಆಡಳಿತ ಮಂಡಳಿಯ ವಿಷ್ಣುಮೂರ್ತಿ ಉಪಾಧ್ಯಾಯ, ಕಿರಣ್ ಭಟ್, ಸಂತೋಷ್ ಶೆಟ್ಟಿ ತೆಂಕರಗುತ್ತು, ಶಿಬಿರದ ಸಂಯೋಜಕರಾದ ಉಮಾ ಪ್ರಸಾದ್, ವಿಕ್ರಂ ಕುಂಟಾರ್, ಸುಂಧೀಂದ್ರ ಆಚಾರ್ಯ, ಸಂಪನ್ಮೂಲ ವ್ಯಕ್ತಿಗಳಾದ ವಿದುಷಿ ಉಷಾ ಹೆಬ್ಬಾರ್, ಡಾ. ಶ್ರುತಿ ಬಲ್ಲಾಳ್, ರಾಘವೇಂದ್ರ ಭಟ್ ಪಣಿಯಾಡಿ, ಗೋವರ್ಧನ ಆಚಾರ್ಯ, ಆಕಾಶ್ ಉಪಾಧ್ಯಾಯ, ವಿದುಷಿ ಅಯನಾ ವಿ. ರಮಣ್ ಮೂಡುಬಿದಿರೆ ಹಾಗೂ ಶಿಬಿರಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು.
ಮಠದ ದಿವಾನ ನಾಗರಾಜ್ ಆಚಾರ್ಯ ಸ್ವಾಗತಿಸಿದರು. ಶಿಬಿರದ ಸಂಚಾಲಕ ವಿದ್ವಾನ್ ಕೆ.ವಿ. ರಮಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
"
ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ದೇಶಕ್ಕಾಗಿ ಎಲ್ಲವನ್ನೂ ಮಿತವಾಗಿ ಉಪಯೋಗಿಸಿ ಎಂದು ಕರೆ ನೀಡಿದ್ದಾರೆ. ಅದು ಮೊಬೈಲ್ ಬಳಕೆಗೂ ಅನ್ವಯವಾಗಲಿದೆ. ಎಲ್ಲ ಮಕ್ಕಳೂ ಸಹ ಮಿತವಾಗಿ&ಹಿತವಾಗಿ ಅಗತ್ಯತೆ ಇದ್ದಷ್ಟೇ ಮೊಬೈಲ್ ಬಳಸಬೇಕು. ಮೊಬೈಲ್ ಬಿಟ್ಟೂ ಸಹ ನಾವು ಇರಬಹುದು ಎಂದು ಪ್ರೇರಣೆ ನೀಡುವುದು ಈ ಶಿಬಿರದ ಉದ್ದೇಶ. ಮುಂದಿನ ವರ್ಷ ಪಾಲಕರಿಗಾಗಿ ಮೊಬೈಲ್ ವರ್ಜನ ಶಿಬಿರ ಆಯೋಜಿಸಲಾಗುವುದು. ಇದು ಪ್ರಾಯೋಗಿಕ ಶಿಬಿರವಾಗಿದ್ದು ಮುಂದಿನ ವರ್ಷ ಎಲ್ಲೆಡೆ ಆಯೋಜಿಸಲಾಗುವುದು.
— ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ.