ಉಡುಪಿಯ ಗೀತಾಮಂದಿರದ ನೃಸಿಂಹ ಸಭಾಂಗಣದಲ್ಲಿ 'ಪುತ್ತಿಗೆ ಸುಗುಣ ಶಿಬಿರ'ವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ, ಶ್ರೀನಿವಾಸ್ ರಾವ್, ವಾಸುದೇವ್ ಶೆಟ್ಟಿ ಇದ್ದರು.
* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
* ಹತ್ತು ದಿನಗಳ 'ಪುತ್ತಿಗೆ ಸುಗುಣ ಶಿಬಿರ'ಕ್ಕೆ ಚಾಲನೆ
ಉಡುಪಿ: ಧಾರ್ಮಿಕ ಜೀವನ ಎಲ್ಲರಿಗೂ ಅವಶ್ಯಕ. ಆಧ್ಯಾತ್ಮಿಕ ಕಾರ್ಯ, ಚಿಂತನೆಯಿಂದ ಮಾತ್ರ ನೆಮ್ಮದಿ ಸಾಧ್ಯ. ಜೀವನದಲ್ಲಿ ಸುಖ-ಸಂಪತ್ತಿಗಿಂತ ನೆಮ್ಮದಿಯೇ ಮುಖ್ಯ. ಜಗತ್ತು ಭೌತಿಕವಾಗಿ ಮುಂದುವರಿದಿದ್ದರೂ ಬೌದ್ಧಿಕವಾಗಿ ಹಿಂದುಳಿದಿದೆ. ಇಂದಿನ ಬಹುತೇಕ ಪಾಲಕರೂ ಸಹ ಮಕ್ಕಳನ್ನು ಭೌತಿಕವಾಗಿಯೇ ಬೆಳೆಸುತ್ತಿರುವುದು ಸೂಕ್ತವಲ್ಲ. ಅಂಕ ಗಳಿಕೆಯ ಆಧಾರದ ಬದಲು ಮೌಲ್ಯಗಳ ಆಧಾರದಲ್ಲಿ ಅವರ ಬದುಕು ಕಟ್ಟಬೇಕು. ಪುರಾಷಾರ್ಥಗಳ ಬಗ್ಗೆ ತಿಳಿಸಬೇಕು ಎಂದು ಪುತ್ತಿಗೆ ಮಠದ ಯತಿಕುಲ ಚಕ್ರವರ್ತಿ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಗೀತಾ ಮಂದಿರದಲ್ಲಿರುವ ನೃಸಿಂಹ ಸಭಾಂಗಣದಲ್ಲಿ ಪುತ್ತಿಗೆ ಮಠದ ವತಿಯಿಂದ ಭಾನುವಾರ (ಏ.19) ಆಯೋಜಿಸಿದ್ದ ಸನಾತನ ಹಿಂದೂ ಸಂಸ್ಕೃತಿಯ ಸಂರಕ್ಷಣೆ-ಸಂವರ್ಧನೆಗಾಗಿ 10 ದಿನಗಳ 'ಪುತ್ತಿಗೆ ಸುಗುಣ ಶಿಬಿರ'ಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು.
ಮೌಲ್ಯ ಶಿಕ್ಷಣ ಅಗತ್ಯ
ಪುತ್ತಿಗೆ ಪಟ್ಟದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಶಾಲೆಗಳಲ್ಲಿ ವಿಷಯವಾರು ಅಧ್ಯಯನ ಆಗುತ್ತದೆಯೇ ಹೊರತು ಮಕ್ಕಳಿಗೆ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆ ಲಭಿಸದು. ಲೌಕಿಕ ವಿದ್ಯೇಯಷ್ಟೇ ಅಲ್ಲಿ ಲಭಿಸುತ್ತಿದ್ದು ಮೌಲ್ಯ ಶಿಕ್ಷಣ ಲಭಿಸದಾಗಿದೆ. ಮನೆಗಳಲ್ಲೂ ಸಹ ಲೌಕಿಕ ವಾತಾವರಣವೇ ಹೆಚ್ಚುತ್ತಿದ್ದು, ಮಕ್ಕಳಿಗಂತೂ ಈಗ 'ಮೊಬೈಲ್ ಸರ್ವಮಯಂ' ಎಂಬಂತಾಗಿದೆ. ಮೌಲ್ಯಗಳ ಮಾರ್ಗದರ್ಶನ, ಸಂಸ್ಕಾರದ ಸೊಗಡೇ ಇಲ್ಲದ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳು ಕ್ರೂರತ್ವ, ದುಷ್ಟತನ, ಅಪರಾಧೀ ಗುಣ ಹೊಂದುತ್ತಿದ್ದಾರೆ. ಅವರನ್ನು ಸರಿ ದಾರಿಗೆ ತರದಿದ್ದಲ್ಲಿ ಸಂಸ್ಕೃತಿ, ಪರಂಪರೆಗೆ ಧಕ್ಕೆಯ ಭೀತಿ ಎದುರಾಗಿದೆ ಎಂದರು.
ಕಾಪು ಹೊಸ ಮಾರಿಗುಡಿಯ ರಾಜರ್ಷಿ ವಾಸುದೇವ್ ಶೆಟ್ಟಿ, ಶ್ರೀನಿವಾಸ್ ಯುನಿವರ್ಸಿಟಿಯ ಕುಲಪತಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು. ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ, ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ ಇನ್ನಿತರರು ಪಾಲ್ಗೊಂಡಿದ್ದರು.
ಸುಗುಣಶ್ರೀ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ವಿದುಷಿ ಉಷಾ ಹೆಬ್ಬಾರ್ ಮತ್ತು ಭಾರತಿ ಕೃಷ್ಣಮೂರ್ತಿ ಶಿಬಿರ ಗೀತೆ ಹಾಡಿದರು.
ಗೀತಾ ಮಂದಿರದ ನಿರ್ವಾಹಕ ಹಾಗೂ ಶಿಬಿರದ ಸಂಚಾಲಕ ಕೆ.ವಿ. ರಮಣ ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 5ರಿಂದ 60 ವರ್ಷದೊಳಗಿನವರಿಗೂ ಅವಕಾಶವಿದ್ದು, 100ಕ್ಕೂ ಅಧಿಕ ಶಿಬಿರಾರ್ಥಿಗಳು ನೋಂದಣಿ ಮಾಡಿದ್ದರು.
ವಿದ್ಯಾರ್ಥಿಗಳ ವರ್ತನೆಗೂ ಮೀಸಲಿಡಿ 100 ಅಂಕ
ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಷಯವಾರು ಪರೀಕ್ಷೆಯಲ್ಲಿ 100 ಅಂಕ ಇರುವಂತೆ ವಿದ್ಯಾರ್ಥಿಗಳ ವರ್ತನೆ (ಬಿಹೇವಿಯರ್)ಗೂ 100 ಅಂಕ ನಿಗದಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಇದ್ದೇನೆ. ಆದರೆ, ಅದು ಅರಣ್ಯ ರೋದನವಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ಸರ್ಕಾರ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಿರುವುದು ಅಭಿನಂದನೀಯ. ಸರ್ಕಾರದ ಈ ಕ್ರಮಕ್ಕೆ ಪ್ರೋತ್ಸಾಹದಾಯಕವಾಗಿ ಪುತ್ತಿಗೆ ಮಠದಿಂದ ಮೇ 14ರಿಂದ 'ಮೊಬೈಲ್ ವರ್ಜನ ಶಿಬಿರ' ಆಯೋಜಿಸಿದ್ದೇವೆ. ಮೊಬೈಲ್ ಗೀಳಿನಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದು ಸುಗುಣೇಂದ್ರ ಶ್ರೀ ಆತಂಕ ವ್ಯಕ್ತಪಡಿಸಿದರು.
ಸುಗುಣೇಂದ್ರ ಶ್ರೀಗಳ ಸಂಕಲ್ಪ ಯಾವಾಗಲೂ ವಿಶಿಷ್ಟವಾಗಿರುತ್ತದೆ. ಶಿಬಿರದ ಮೂಲಕ ಆಧ್ಯಾತ್ಮಿಕ ಚಿಂತನೆ ಬಿತ್ತುವ ಮೂಲಕ ಮಕ್ಕಳಲ್ಲಿ ಸುಗುಣ ಬೆಳೆಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ. ಯುವ ಸಮುದಾಯ ಶಾಲೆಯ ಪಠ್ಯಕ್ಕಷ್ಟೇ ಸೀಮಿತವಾಗದೆ ಸಮರ್ಪಕವಾಗಿ ಬೆಳೆಯುವ, ದೇಶ-ಸಮಾಜ ಸೇವೆ ಮಾಡುವ, ಪಾಲಕರು, ಗುರು-ಹಿರಿಯರನ್ನು ಗೌರವಿಸುವ ಗುಣ ಅಳವಡಿಸಿಕೊಳ್ಳಬೇಕು. ಅದಕ್ಕೆ 'ಸುಗುಣ' ಶಿಬಿರ ಪೂರಕವಾಗಿದೆ.