ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿ ಮುಂದೆ ಜಮಾಯಿಸಿರುವ ರಿಕ್ಷಾ ಚಾಲಕರು. 
ಉಡುಪಿ

ಆಟೋರಿಕ್ಷಾ ಚಾಲಕರ ದಿಢೀರ್ ಪ್ರತಿಭಟನೆ

ಇಂದಿರಾ ಎನ್ ಕೆ
ಬಂಟ್ವಾಳ: ಬಿ.ಸಿ.ರೋಡಿನ ಶ್ರೀನಿವಾಸ್ ಆರ್ಕೆಡ್ ಮುಂಭಾಗದಲ್ಲಿ ಆಟೋರಿಕ್ಷಾ ನಿಲುಗಡೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ರಿಕ್ಷಾ ಚಾಲಕರು ಬಿ.ಸಿ.ರೋಡಿನ ಫ್ಲೈಓವರ್ ಕೆಳಭಾಗದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಬಿ.ಸಿ.ರೋಡಿನ ರಿಕ್ಷಾ ಚಾಲಕರು ಶ್ರೀನಿವಾಸ್ ಆರ್ಕೆಡ್ ಮುಂಭಾಗದಲ್ಲಿ ಹಲವು ಸಮಯಗಳಿಂದ ಎರಡು ರಿಕ್ಷಾಗಳನ್ನು ನಿಲುಗಡೆ ಮಾಡುತ್ತಿದ್ದರು. ಇದೇ ಜಾಗದಲ್ಲಿ ಪುರಸಭೆಯ ಪ್ರಯಾಣಿಕರ ತಂಗುದಾಣವೊಂದಿದ್ದು ಟ್ರಾಫಿಕ್ ಜಾಮ್ ಸಮಸ್ಯೆ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ. ಇಲ್ಲಿ ರಿಕ್ಷಾ ನಿಲುಗಡೆ ಮಾಡಿದರೆ ಕೇಸ್ ದಾಖಲಿಸಲಾಗುವುದು ಎಂದು ಬುಧವಾರ ಸಂಜೆ ಸಂಚಾರಿ ಠಾಣೆಯ ಎಸ್‌ಐ ತಾಕೀತು ಮಾಡಿರುವುದು ರಿಕ್ಷಾ ಚಾಲಕರನ್ನು ಕೆರಳಿಸಿದೆ.
ಸಂಘಟಿತರಾದ ರಿಕ್ಷಾ ಚಾಲಕರು ಗುರುವಾರ ಬೆಳಗ್ಗಿನಿಂದ ಪ್ರತಿಭಟನೆ ನಡೆಸಿದರು. ರಿಕ್ಷಾ ಚಾಲಕ-ಮಾಲೀಕರ ಸಂಘದ ಅಧ್ಯಕ್ಷ ವಿಶ್ವನಾಥ ಚೆಂಡ್ತಿಮಾರ್ ಮಾತನಾಡಿ, ಬೆಲೆ ಏರಿಕೆಯ ಈ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಾಣೆಮಂಗಳೂರು, ಬಂಟ್ವಾಳಕ್ಕೆ ಕೇವಲ 15 ರೂಪಾಯಿಗೆ ಸರ್ವೀಸ್ ಕೊಡುತ್ತಿದ್ದೇವೆ. ಬಿ.ಸಿ.ರೋಡ್‌ನಲ್ಲಿರುವ ರಿಕ್ಷಾ ನಿಲ್ದಾಣವನ್ನು ತೆರವು ಮಾಡಿದ್ದಾರೆ. ಈ ವಿಚಾರವಾಗಿ ಇನ್‌ಸ್ಪೆಕ್ಟರ್ ಬಳಿ ತಿಳಿಸಿದಾಗ ಮನವಿ ನೀಡಲು ತಿಳಿಸಿದ್ದರು.
ಮನವಿ ನೀಡಿದ ಬಳಿಕ ಸಂಚಾರಿ ಠಾಣೆಯ ಎಸ್‌ಐ ಆಟೋ ನಿಲ್ಲಿಸಲು ಅವಕಾಶವನ್ನು ನೀಡಿದರು. ಆದರೆ ಒಂದೆರಡು ದಿನಗಳಿಂದ ಆ ಜಾಗದಲ್ಲಿ ಖಾಸಗಿ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದ್ದು, ಅಷ್ಟೇ ಅಲ್ಲದೆ ನಿನ್ನೆ ಹಲವು ರಿಕ್ಷಾ ಚಾಲಕ ಮೇಲೆ ಕೇಸ್‌ಗಳನ್ನು ಕೂಡ ಹಾಕಲಾಗಿದೆ. ಇದನ್ನು ಪ್ರಶ್ನಿಸಿದಾಗ, ಟ್ರಾಫಿಕ್ ಪೊಲೀಸರು ಅಲ್ಲಿ ರಿಕ್ಷಾ ನಿಲ್ಲಿಸಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ ಎಂದು ದೂರಿದರು.
ಇದೇ ವಿಚಾರವಾಗಿ ಬಂಟ್ವಾಳ ಉಪವಿಭಾಗದ ಎಎಸ್ಪಿ ಜತೆ ರಿಕ್ಷಾ ಚಾಲಕರು ಸಭೆ ನಡೆಸಿದರು. ನಂತರ ರಿಕ್ಷಾ ಚಾಲಕರು, ವಾಣಿಜ್ಯ ಸಂಕೀರ್ಣದ ಅಂಗಡಿ ವ್ಯಾಪಾರಿಗಳು ಹಾಗೂ ಪೊಲೀಸರು ಸಭೆ ನಡೆಸಿದ್ದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಚರ್ಚಿಸಿದ್ದಾರೆ.