ಉಡುಪಿ ಮಣಿಪಾಲದಲ್ಲಿರುವ ಕಸ್ತೂರ್ಬಾ ಆಸ್ಪತ್ರೆ. 
ಉಡುಪಿ

ಜಠರ ಕರುಳಿನ ರಕ್ತಸ್ರಾವಕ್ಕೆ ಯಶಸ್ವಿ ಚಿಕಿತ್ಸೆ

* ಮಣಿಪಾಲದ ಕೆಎಂಸಿ ವೈದ್ಯರ ಸಾಧನೆ

* ಎರಡೇ ದಿನದಲ್ಲಿ ರೋಗಿ ಚೇತರಿಕೆ

ಉಡುಪಿ: ವ್ಯಕ್ತಿಯೊಬ್ಬರ ಹೊಟ್ಟೆಯೊಳಗೆ ಮೇಲ್ಭಾಗದ ಜಠರ ಕರುಳಿನಲ್ಲಿ ಉಂಟಾಗಿದ್ದ ರಕ್ತಸ್ರಾವಕ್ಕೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (ಕೆಎಂಸಿ)ಯ ಗ್ಯಾಸ್ಟ್ರೊಎಂಟರಾಲಜಿ ಮತ್ತು ಇಂರ್ಟವೆನ್ಷನಲ್​ ರೇಡಿಯಾಲಜಿ ತಂಡ ಯಶಸ್ವಿ ಚಿಕಿತ್ಸೆ ನಿರ್ವಹಿಸಿದ್ದಾರೆ. 
ಅಸಹಜವಾಗಿ ರಕ್ತನಾಳ ಮುಚ್ಚಿದ್ದರೂ ಸಹ ರೋಗಿಗೆ ತೆರೆದ ಶಸ್ತ್ರ ಚಿಕಿತ್ಸೆ ನಡೆಸದೆ ಹೊಸ ವೈದ್ಯಕೀಯ ತಂತ್ರಜ್ಞಾನ ನೆರವಿನಿಂದ ಚಿಕಿತ್ಸೆ ಮಾಡಿದ್ದಾರೆ. ಕೇವಲ 48 ಗಂಟೆಗಳೊಳಗೆ ವ್ಯಕ್ತಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಎಂಡೋಸ್ಕೋಪಿ ಚಿಕಿತ್ಸೆ

ಅಂದಾಜು 60 ವರ್ಷದ ವ್ಯಕ್ತಿಯೋರ್ವ ರಕ್ತ ವಾಂತಿ ಆಗುತ್ತಿರುವ ಹಿನ್ನೆಲೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾದರು. ದೀರ್ಘಕಾಲದ ಯಕೃತ್​ ಕಾಯಿಲೆ ಮತ್ತು ಪೋರ್ಟಲ್​ ಹೈಪರ್ಟೆನ್ಷನ್​ನ ಫಂಡಲ್​ ವೆರಿಕ್ಸ್​ನಿಂದಾಗಿ ಜಠರಗರುಳಿನ ರಕ್ತಸ್ರಾವ ಉಂಟಾಗಿತ್ತು ಪತ್ತೆಯಾಯಿತು. ಗ್ಯಾಸ್ಟ್ರೊಎಂಟರಾಲಜಿ ತಂಡ ಕೆಲವೇ ಗಂಟೆಗಳಲ್ಲಿ ರಕ್ತಸ್ರಾವ ನಿಯಂತ್ರಣಕ್ಕೆ ತಂದರು. ಬಳಿಕ ಅದಕ್ಕೆ ಮೂಲ ಕಾರಣವಾಗಿದ್ದ ರಕ್ತನಾಳದ ಶಂಟ್​ಅನ್ನು ಇಂರ್ಟವೆನ್ಷನಲ್​ ರೇಡಿಯಾಲಜಿ ತಂಡವು ರಕ್ತನಾಳಗಳ ಒಳಗಿನಿಂದಲೇ ಕಾರ್ಯನಿರ್ವಹಿಸಿ ಮುಚ್ಚಿದರು. ಯಾವ ಹಂತದಲ್ಲಿಯೂ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯ ಬರಲಿಲ್ಲ. ಕೇವಲ ಎಂಡೋಸ್ಕೋಪಿ ಮೂಲಕ ಚಿಕಿತ್ಸೆ ನಿರ್ವಹಿಸಿದರು.
ಡಾ. ಹರ್ಷಿತ್​ ಕೆ. ನೇತೃತ್ವದ ಇಂರ್ಟವೆನ್ಷನಲ್​ ರೇಡಿಯಾಲಜಿ ತಂಡವು ಪ್ಲಗ್​-ಅಸಿಸ್ಟೆಡ್​ ರೆಟ್ರೋಗ್ರೇಡ್​ ಟ್ರಾನ್ಸ್​ವೀನಸ್​ ಒಬ್ಲಿಟರೇಷನ್​ ಎಂಬ ಕಾರ್ಯವಿಧಾನ ನಡೆಸಿತು. ಇಂಥ ಪ್ರಕರಣಗಳು ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಾವು ನೀಡುತ್ತಿರುವ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆಗೆ  ನಿದರ್ಶನವಾಗಿದೆ. ರೋಗಿಯು ಮಹಾನಗರಕ್ಕೆ ತೆರಳಿ ಪಡೆಯಬೇಕಾಗಿದ್ದ ಅದೇ ಗುಣಮಟ್ಟದ ಚಿಕಿತ್ಸೆ ಇಲ್ಲಿಯೇ ಪಡೆಯಬಹುದಾಗಿದೆ ಎಂದು ಮಾಹೆ ಬೋಧನಾ ಆಸ್ಪತ್ರೆಗಳ ಸಿಇಒ ಡಾ. ಸುಧಾಕರ್​ ಕಂಟಿಪುಡಿ ತಿಳಿಸಿದ್ದಾರೆ.
"

ಎಂಡೋಸ್ಕೋಪಿ ವಿಧಾನ ಕೇವಲ ರೋಗನಿರ್ಣಯಕ್ಕಾಗಿ ಮಾತ್ರ ಪ್ರಯೋಜಕವಲ್ಲ. ಸ್ಕೋಪ್​ನ ತುದಿಯಲ್ಲಿರುವ ಅಲ್ಟ್ರಾಸೌಂಡ್​ ವ್ಯವಸ್ಥೆಯು ರೋಗಿ ಗಂಭೀರ ಸ್ಥಿತಿಯಲ್ಲಿದ್ದಾಗಲೇ ಒಡೆದುಹೋಗಿದ್ದ ರಕ್ತನಾಳವನ್ನು ನಿಖರವಾಗಿ ಗುರುತಿಸಿ ಚಿಕಿತ್ಸೆ ನೀಡಲು ನಮಗೆ ನೆರವಾಯಿತು. ರಕ್ತಸ್ರಾವ ಶೀಘ್ರವಾಗಿ ನಿಯಂತ್ರಣಕ್ಕೆ ತರಲು ಹಾಗೂ ಒಂದು ಬಿಕ್ಕಟ್ಟಿನಿಂದ ಇನ್ನೊಂದು ಬಿಕ್ಕಟ್ಟು ಉಂಟಾಗುವುದನ್ನು ತಡೆಯಲು ಎಂಡೋಸ್ಕೋಪಿ ಸಹಕರಿಸಿತು.

— ಡಾ. ಶಿರಣ್​ ಶೆಟ್ಟಿ. ಕೆಎಂಸಿಯ ಗ್ಯಾಸ್ಟ್ರೊಎಂಟರಾಲಜಿಸ್ಟ್​.