ಡಾ.ಪಾಲ್ ಸಿ.ಸಾಲಿನ್ಸ್ ಅವರನ್ನು ಸನ್ಮಾನಿಸಲಾಯಿತು. ಡಾ.ಎಂ.ಶಾಂತಾರಾಮ ಶೆಟ್ಟಿ, ನಿಟ್ಟೆ ವಿವಿ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಮೊದಲಾದವರಿದ್ದರು.
ಉಳ್ಳಾಲ: ದಂತ ವೈದ್ಯಕೀಯ, ಶಸ್ತ್ರಚಿಕಿತ್ಸೆ, ಆರೋಗ್ಯ ಸೇವೆ ಮತ್ತು ಸಿಂಥೆಟಿಕ್ ಇಂಟೆಲಿಜೆನ್ಸ್‌ಗಳ ಸಮನ್ವಯವೇ ಭವಿಷ್ಯದ ಆರೋಗ್ಯ ಕ್ಷೇತ್ರವನ್ನು ರೂಪಿಸಲಿದೆ. ನಿರಂತರ ಕಲಿಕೆ, ನವೋದ್ಯಮ ಮತ್ತು ರೋಗಿ ಕೇಂದ್ರಿತ ಸೇವೆ ವೈದ್ಯಕೀಯ ವೃತ್ತಿಯ ಯಶಸ್ಸಿನ ಮೂಲ ಎಂದು ನಾರಾಯಣ ಹೆಲ್ತ್ ಮಜುಂದಾರ್ ಶಾ ಮಲ್ಟಿ ಸ್ಪೆಷಾಲಿಟಿ ಮೆಡಿಕಲ್ ಮತ್ತು ಕ್ಯಾನ್ಸರ್ ಸೆಂಟರ್‌ನ ಮೆಡಿಕಲ್ ನಿರ್ದೇಶಕ ಡಾ.ಪಾಲ್ ಸಿ.ಸಾಲಿನ್ಸ್ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯ ಆವಿಷ್ಕಾರ್ ಸಭಾಂಗಣದಲ್ಲಿ ಶುಕ್ರವಾರ ಪ್ರೊ.ಎನ್.ಶ್ರೀಧರ್ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಉಪಕುಲಾಧಿಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ವೈದ್ಯಕೀಯ ಶಿಕ್ಷಣ ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳ ಸಮನ್ವಯದೊಂದಿಗೆ ಮುಂದುವರಿಯಬೇಕು. ವಿದ್ಯಾರ್ಥಿಗಳು ನಿರಂತರ ಕಲಿಕೆ, ಸಂಶೋಧನೆ ಮತ್ತು ಸೇವಾ ಮನೋಭಾವವನ್ನು ಅಳವಡಿಸಿಕೊಂಡಾಗ ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯ ಎಂದರು.
ನಿಟ್ಟೆ ವಿವಿ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಪ್ರೊ.ಮಿತ್ರಾ ಎನ್.ಹೆಗ್ಡೆ ಉಪಸ್ಥಿತರಿದ್ದರು.