ಎಸ್‌ಡಿಎಂ ಪಾಲಿಟೆಕ್ನಿಕ್ ಪ್ರವೇಶೋತ್ಸವ ಸಮಾರಂಭವನ್ನು ಪೂರನ್ ವರ್ಮ ಉದ್ಘಾಟಿಸಿದರು. ಸೋನಿಯಾ ಯಶೋವರ್ಮ, ಪ್ರಾಂಶುಪಾಲ ಸಂತೋಷ್, ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಗಾಳಿ ಜೋರಾಗಿ ಬೀಸುವಾಗ ಎಲ್ಲ ಪಕ್ಷಿಗಳು ಮರಗಳಲ್ಲಿ ಆಸರೆ ಪಡೆಯುತ್ತವೆ, ಆದರೆ ಗರುಡ ಮಾತ್ರ ಆ ಗಾಳಿಯನ್ನು ಬಳಸಿಕೊಂಡು ಇನ್ನೂ ಎತ್ತರಕ್ಕೆ ಹಾರಾಡುತ್ತದೆ. ಹಾಗೆ ಸಮಸ್ಯೆಗಳು ಎಲ್ಲರಿಗೂ ಬರುತ್ತವೆ, ಆದರೆ ಅವುಗಳನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡರೆ ಜೀವನದಲ್ಲಿ ಎತ್ತರಕ್ಕೆ ಏರಬಹುದು. ಅವಕಾಶಗಳನ್ನು ಸ್ವೀಕರಿಸಲು ಹಿಂಜರಿಯಬೇಡಿ. ಪರೀಕ್ಷೆಗಾಗಿ ಓದಬೇಡಿ ಜೀವನಕ್ಕಾಗಿ ಕಲಿಯಿರಿ. ಉದ್ಯೋಗಕ್ಕಾಗಿ ಮಾತ್ರವಲ್ಲದೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಯಾಗಿ ಬೆಳೆಯಿರಿ ಎಂದು ಉಜಿರೆಯ ಸೋನಿಯಾ ಯಶೋವರ್ಮ ಕಿವಿಮಾತು ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ಪ್ರವೇಶೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಮಾತನಾಡಿ, ಪಾಲಿಟೆಕ್ನಿಕ್ ಎಂದರೆ ಬಹು ಕೌಶಲವುಳ್ಳವರು ಎಂದರ್ಥ. ವಿದ್ಯಾರ್ಥಿಗಳು ಬೌದ್ಧಿಕ ಸಾಮರ್ಥ್ಯದ ಜತೆಗೆ ಪ್ರಾಯೋಗಿಕ ಅನುಭವಗಳಲ್ಲೂ ಸಬಲರಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ಪರಿಣಿತರಾಗಿ, ಕ್ರಿಯಾತ್ಮಕ ಯೋಚನೆ ಮತ್ತು ಸಮೂಹ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ಒಂದೇ ವಿಷಯಕ್ಕೆ ಸೀಮಿತರಾಗದೆ ಬಹುಮುಖಿ ಜ್ಞಾನವುಳ್ಳವರಾಗಬೇಕು. ಸಕಾರಾತ್ಮಕ ಚಿಂತನೆಗಳಿಂದ ಮನೋಧೈರ್ಯ ಬೆಳೆಸಿಕೊಂಡು ಸವಾಲು ಮತ್ತು ಸಮಸ್ಯೆಗಳ ನಿವಾರಣೆಯತ್ತ ಸಾಗಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಸಂತೋಷ್ ಅಧ್ಯಕ್ಷತೆ ವಹಿಸಿದರು. ಪಾಲಿಟೆಕ್ನಿಕ್ ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ವಿದ್ಯಾರ್ಥಿಗಳು, ಪಾಲಕರು, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ಶಿವಪ್ರಸಾದ್ ಸ್ವಾಗತಿಸಿದರು. ಶಂಕರ್ ಭಟ್ ವಂದಿಸಿ, ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಬೇಕಾದಷ್ಟು ಸಿಗುತ್ತಾರೆ. ಆದರೆ ಉತ್ತಮ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿಗಳು ಸಮಾಜದಲ್ಲಿ ಶಾಶ್ವತ ಗೌರವ ಪಡೆಯುತ್ತಾರೆ. ಕಲಿಯುವ ಪ್ರತಿಯೊಂದು ವಿಷಯ ನಮ್ಮ ಉದ್ಯೋಗಕ್ಕೆ ನೆರವಾಗುವುದರ ಜತೆಗೆ ಇಲ್ಲಿ ಬೆಳೆಸಿಕೊಳ್ಳುವ ಆತ್ಮವಿಶ್ವಾಸ, ಪ್ರಾಮಾಣಿಕತೆ, ಶಿಸ್ತು ಹಾಗೂ ಮಾನವಿಯತೆ ಇಡೀ ಜೀವನವನ್ನು ರೂಪಿಸುತ್ತದೆ.
— ಸೋನಿಯಾ ಯಶೋವರ್ಮ