ಉಡುಪಿ: ಮೀನುಗಾರಿಕೆ ಹಾಗೂ ಮೀನು ಸಾಕಾಣಿಕೆಯಂತಹ ಕೃಷಿ ಉದ್ಯಮಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಡಿಮೆ ಬಂಡವಾಳದೊಂದಿಗೆ ಉತ್ತಮ ಆದಾಯ ಗಳಿಸಲು ಇಲ್ಲಿ ವಿಪುಲ ಅವಕಾಶವಿದೆ. ತರಬೇತಿಯಲ್ಲಿ ಗಳಿಸಿದ ಜ್ಞಾನ ಮತ್ತು ಕೌಶಲದಿಂದ ಸ್ವಯಂ ಉದ್ಯೋಗದತ್ತ ಹೆಜ್ಜೆ ಇಟ್ಟರೆ ಯಶಸ್ಸು ಸಾಧ್ಯ ಎಂದು ಕೆನರಾ ಬ್ಯಾಂಕ್ ಮರವಂತೆ ಶಾಖೆಯ ವ್ಯವಸ್ಥಾಪಕ ಸರೀಕ್ ರೇವನ್ ಅನಿಸಿಕೆ ವ್ಯಕ್ತಪಡಿಸಿದರು.
ಮರವಂತೆ ಮೀನುಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ ಬ್ರಹ್ಮಾವರ, ಮರವಂತೆಯ ಮೀನುಗಾರರ ಸಹಕಾರ ಸಂಘ ನಿ. ಆಶ್ರಯದಲ್ಲಿ ಆಯೋಜಿಸಿದ್ದ ಮೀನು ಸಾಕಾಣಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮರವಂತೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ ಮಾತನಾಡಿ, ತರಬೇತಿಯ ಮೂಲಕ ಅಗತ್ಯ ಜ್ಞಾನ ಗಳಿಸಿ, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಯಶಸ್ವಿ ಉದ್ಯಮಿಗಳಾಗಿ ಬೆಳೆಯಬೇಕು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜೇಶ ಮಾತನಾಡಿ, ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಇಂತಹ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಮಾತನಾಡಿ, ತರಬೇತಿಯ ನಂತರ ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತರಿರುವವರಿಗೆ ಬ್ಯಾಂಕ್ ಸಾಲ ಸೌಲಭ್ಯಗಳ ಮಾರ್ಗದರ್ಶನ ಹಾಗೂ ಸಹಕಾರ ನೀಡಲಾಗುವುದು ಎಂದರು.
ಮರವಂತೆ ಮೀನುಗಾರರ ಸಹಕಾರ ಸಂಘದ ಉಪಾಧ್ಯಕ್ಷ ರತ್ನಾಕರ ಉಪಸ್ಥಿತರಿದ್ದರು. ಕಚೇರಿ ಸಹಾಯಕ ಶಾಂತಪ್ಪ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಸಂತೋಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮರವಂತೆ ಮೀನುಗಾರರ ಸಹಕಾರ ಸಂಘದ ಸಿಇಒ ಗಂಗಾಧರ ವಂದಿಸಿದರು.