ಉದ್ಯಮಿ ಕೆ.ಶ್ರೀಪತಿ ಭಟ್ ಅವರಿಗೆ ಯಕ್ಷಭಾರತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನ ಪರಿಷತ್‌ನ ಸದಸ್ಯ ಪ್ರತಾಪಸಿಂಹ ನಾಯಕ್, ಸಂಪತ್ ಸುವರ್ಣ, ಸಂಚಾಲಕ ಮಹೇಶ್ ಕನ್ಯಾಡಿ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ಸೂಕ್ತ ಮಾರ್ಗದರ್ಶನದಿಂದ ಕೆಲಸದಲ್ಲಿ ಯಶ

ಇಂದಿರಾ ಎನ್ ಕೆ
ಬೆಳ್ತಂಗಡಿ: ಸಂಸ್ಥೆ ಬೆಳೆಯಲು ಯಕ್ಷಗಾನವನ್ನೇ ಜೀವನದ ಉಸಿರನ್ನಾಗಿಸಿ ದೀಕ್ಷೆ, ಸಂಕಲ್ಪ ತೊಟ್ಟವರು ಯಕ್ಷಭಾರತಿಯ ಹಿಂದಿನ ಶಕ್ತಿಯಾಗಿದ್ದಾರೆ. ಉತ್ಸಾಹ, ಶ್ರದ್ಧೆಯಿಂದ ನಿರಂತರ ಸೇವೆ ನೀಡಿ ಸಂಸ್ಥೆಯನ್ನು ಬೆಳೆಸಿದ್ದಾರೆ. ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಮುನ್ನಡೆಸಿದರೆ ಯಾವ ಕೆಲಸ ಮಾಡಲೂ ಸಾಧ್ಯವೆಂಬುದನ್ನು ಯಕ್ಷಭಾರತಿ ತೋರಿಸಿಕೊಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಕನ್ಯಾಡಿ ಯಕ್ಷಭಾರತಿಯ 11ನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಕೆ.ಶ್ರೀಪತಿ ಭಟ್ ಮಾತನಾಡಿ, ಯಕ್ಷಗಾನ ಕರಾವಳಿಯ ಶ್ರೇಷ್ಠ ಕಲೆ. ಸನಾತನ ಹಿಂದೂ ಧರ್ಮ, ಭಾರತೀಯ ಪರಂಪರೆಯಿಂದ ಜನಮಾನಸದಲ್ಲಿ ಬಿಂಬಿಸುವ ಕಲೆಯಾಗಿದೆ. ಯಕ್ಷಭಾರತಿ ನಿರಂತರ ಕಲಾ ಸೇವೆಯಲ್ಲಿ ಮುನ್ನಡೆಯಲಿ ಎಂದರು.
ಕೆ.ಶ್ರೀಪತಿ ಭಟ್ ಅವರಿಗೆ ಯಕ್ಷಭಾರತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಪತ್ ಸುವರ್ಣ ಮಾತನಾಡಿದರು. ಭಾರತಮಾತಾ ಪೂಜನ ಕಾರ್ಯಕ್ರಮ ನಡೆಯಿತು. ಯಕ್ಷಭಾರತಿಯ ದಶಮಾನೋತ್ಸವ ಸ್ಮರಣ ಸಂಚಿಕೆ ದಶಪರ್ವ ಅನಾವರಣಗೊಳಿಸಲಾಯಿತು.
ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ. ಗುರುರಾಜ ನಿರೂಪಿಸಿ, ವಂದಿಸಿದರು. ಯಕ್ಷಭಾರತಿಯ ಯುವ ಕಲಾವಿದರು ಹಾಗೂ ಹಿರಿಯ ಕಲಾವಿದರಿಂದ ಲೀಲಾಮೂರ್ತಿ ಶ್ರೀ ಜನಾರ್ದನ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಸಂಚಾಲಕ ಮಹೇಶ್ ಕನ್ಯಾಡಿ, ಕಾರ್ಯದರ್ಶಿ ದಿವಾಕರ ಆಚಾರ್ಯ ಸಹಕರಿಸಿದರು.

ವಿಶೇಷ ಗೌರವಾರ್ಪಣೆ

ಗುರುವಾಯನಕೆರೆಯ ಡಾ.ವೇಣುಗೋಪಾಲ ಶರ್ಮ ಅವರಿಗೆ ಆರೋಗ್ಯ ಸೇವಾ ಗೌರವ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಬಿ.ಸಂಪತ್ ಸುವರ್ಣ ಅವರಿಗೆ ಯುವ ಸೇವಾ ಗೌರವ, ಉಜಿರೆ ನಿವೃತ್ತ ಶಿಕ್ಷಕ ಮುರಳಿಕೃಷ್ಣ ಆಚಾರ್ಯ ಅವರಿಗೆ ಶಿಕ್ಷಣ ಸೇವಾ ಗೌರವ, ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಕೆ.ಮೋಹನ ಕುಮಾರ್ ಅವರಿಗೆ ಸೇವಾ ತಂಡ ಗೌರವ ಸಮರ್ಪಿಸಲಾಯಿತು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಾದ ಮುಕ್ತಿಶ್ರೀ ಎಂ. ಮತ್ತು ಕಾವ್ಯಾ ಅವರಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.