ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಎಸ್.ಎನ್.ಕಾಕತ್ಕರ್ ಮಾತನಾಡಿದರು. ರಾಜಶೇಖರ್ ಪಿ., ಅಮರೇಶ್ ಹೆಬ್ಬಾರ್ ಮೊದಲಾದವರಿದ್ದರು.
ಬೆಳ್ತಂಗಡಿ: ಕೈಗಾರಿಕಾ ತರಬೇತಿಯೊಂದಿಗೆ ಉತ್ತಮ ವ್ಯಕ್ತಿತ್ವ, ಶಿಸ್ತು, ಕೌಶಲ ಹಾಗೂ ನಿರಂತರ ಕಲಿಕೆಯ ಮನೋಭಾವ ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ದೇಶದ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸದಾ ಸಜ್ಜಾಗಿರಬೇಕು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಡಾ.ಎಸ್.ಎನ್.ಕಾಕತ್ಕರ್ ಹೇಳಿದರು.
ವೇಣೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರವಿಂದ್ ಮೋಟಾರ್ಸ್ ಸಂಸ್ಥೆಯ ಉಪ ಮಹಾಪ್ರಬಂಧಕ ರಾಜಶೇಖರ್ ಪಿ., ಇಂದಿನ ಕೈಗಾರಿಕಾ ಕ್ಷೇತ್ರದಲ್ಲಿ ತಾಂತ್ರಿಕ ಪರಿಣತಿಯ ಜತೆಗೆ ಸಮಯಪಾಲನೆ, ಸಂವಹನ ಕೌಶಲ ಮತ್ತು ತಂಡದೊಂದಿಗೆ ಕಾರ್ಯನಿರ್ವಹಿಸುವ ಗುಣ ಅತ್ಯಂತ ಮುಖ್ಯ ಎಂದರು.
ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಪ್ಲೇಸ್‌ಮೆಂಟ್ ಅಧಿಕಾರಿ ಅಮರೇಶ್ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಸ್ವಾಗತಿಸಿದರು. ವಿದ್ಯಾರ್ಥಿಗಳ ಪರವಾಗಿ ರೋಹಿತ್, ಪ್ರಜ್ಞೇಶ್ ಹಾಗೂ ಸ್ಯಾಂಡ್ರ ಡಿಸೋಜ ಅನುಭವ ಹಂಚಿಕೊಂಡರು. ಪೋಷಕರ ಪರವಾಗಿ ಧರ್ಣಪ್ಪ ಮೂಲ್ಯ ಹಾಗೂ ಸುವರ್ಣ ಮಾತನಾಡಿದರು.
ಸಂಸ್ಥೆಯ ಹಿತೈಷಿ ಜಗನ್ನಾಥ ಎಚ್. ಅವರನ್ನು ಸನ್ಮಾನಿಸಲಾಯಿತು. ತಮ್ಮ 3 ಮಕ್ಕಳನ್ನು ಸಂಸ್ಥೆಯಲ್ಲಿ ಕಲಿಸಿದ ಇಬ್ಬರು ಪಾಲಕರನ್ನು ಗೌರವಿಸಲಾಯಿತು. ವೆಲ್ಡರ್ ಟ್ರೇಡ್‌ನ ಸಂಪತ್ ಅವರಿಗೆ ಬೆಸ್ಟ್ ಸ್ಟೂಡೆಂಟ್ ಔಟ್‌ಗೋಯಿಂಗ್ ಪ್ರಶಸ್ತಿ ಪ್ರದಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಪೂಜ್ಯಾ ಮತ್ತು ಪ್ರಭಾ ಪ್ರಾರ್ಥಿಸಿದರು. ಶ್ರವಣ್ ಕುಮಾರ್ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಸತೀಶ್ ನಿರೂಪಿಸಿದರು.