ಉಜಿರೆ ಎಸ್‌ಡಿಎಂ ಪಪೂ ಕಾಲೇಜು ತರಗತಿ ಪ್ರತಿನಿಧಿಗಳ ಮತ್ತು ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ಸಮಾರಂಭವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ ಸಿಂಹ ನಾಯಕ್ ಉದ್ಘಾಟಿಸಿದರು. ಪ್ರಮುಖರಾದ ಪೂರನ್ ವರ್ಮ, ಡಾ.ರಾಜೇಶ್ ಬಿ., ಪ್ರಮೋದ್ ಕುಮಾರ್ ಬಿ. ಮೊದಲಾದವರು ಇದ್ದರು. 
ಉಡುಪಿ

ಏಕಾಗ್ರತೆ, ಪರಿಶ್ರಮದಿಂದ ಜೀವನದಲ್ಲಿ ಯಶ

ಇಂದಿರಾ ಎನ್ ಕೆ
ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಜೀವನದ ಪ್ರಮುಖ ಘಟ್ಟ. ಏಕಾಗ್ರತೆಯಿಂದ ಜೀವನ ರೂಪಿಸುವ ಸಂಕಲ್ಪ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಯಾವುದೇ ವಿಷಯದಲ್ಲಿ ಪರಿಣತಿ ಅತ್ಯಗತ್ಯ. ವಿದ್ಯಾಭ್ಯಾಸದ ಕಡೆ ಗಮನ ಹರಿಸಿದರೆ ಉತ್ತಮ ಅಂಕ ಗಳಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಧೈರ್ಯ ಬೆಳೆಸಿಕೊಂಡಾಗ ನಾಯಕರಾಗಿ ಹೊರಹೊಮ್ಮಲು ಸಹಕಾರಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದರು.
ಉಜಿರೆ ಎಸ್‌ಡಿಎಂ ಪಪೂ ಕಾಲೇಜು ಇಂದ್ರಪ್ರಸ್ಥ ಸಭಾಂಗಣದಲ್ಲಿ ತರಗತಿ ಪ್ರತಿನಿಧಿಗಳು ಮತ್ತು ಸ್ವಚ್ಛತಾ ಸೇನಾನಿಗಳ ಪದ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ. ತರಗತಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಉತ್ತಮ ನಾಯಕ ತನ್ನ ಕರ್ತವ್ಯ ಅರಿತು ಮುನ್ನಡೆಯಬೇಕು. ಅಧಿಕಾರದಿಂದ ಬೀಗಿದರೆ ಮಾಡಿದ ಕಾರ್ಯಗಳು ಫಲ ನೀಡುವುದಿಲ್ಲ. ತಾಳ್ಮೆ ಹಾಗೂ ಜವಾಬ್ದಾರಿ ಅರಿತು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿದರೆ ಎಲ್ಲರ ನಂಬಿಕೆಗೆ ಪಾತ್ರರಾಗುತ್ತೀರಿ ಎಂದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಗಳಿಸಿ ಜೆಇಇ ಹಾಗೂ ಸಿಇಟಿ ಮತ್ತು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಹರಿಕೃಷ್ಣ, ಸಿಎ ಫೌಂಡೇಶನ್ ಪೂರ್ಣಗೊಳಿಸಿದ ಅಂಶುಲ ಶ್ರೇಷ್ಠ ಮತ್ತು ಪ್ರಥಮ್ ಅವರನ್ನು ಗೌರವಿಸಲಾಯಿತು.
ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ. ಸ್ವಚ್ಛತಾ ಸೇನಾನಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿನಿಗಳಾದ ಸ್ಮತಿ ಸ್ವಾಗತಿಸಿದರು. ಆದ್ಯತಾ ವಂದಿಸಿದರು. ಉಪನ್ಯಾಸಕಿ ವೈದೇಹಿ ಎಸ್. ನಿರೂಪಿಸಿದರು.
"

ವಿದ್ಯಾರ್ಥಿ ನಾಯಕ ಉತ್ತಮ ಸಂವಹನ ಕಲೆ ಹೊಂದಿರಬೇಕು. ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಾರೆ. ಎಲ್ಲರ ಕಾಳಜಿ ವಹಿಸುತ್ತ ನಂಬಿಕೆಗೆ ಪಾತ್ರರಾದರೆ ನಾಯಕನ ಜವಾಬ್ದಾರಿ ಪರಿಪೂರ್ಣಗೊಳ್ಳುತ್ತದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು.

— ಪೂರನ್ ವರ್ಮ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ತಂತ್ರಜ್ಞಾನ ಮತ್ತು ವಸತಿ ನಿಲಯಗಳ ಕಾರ್ಯನಿರ್ವಹಣಾಧಿಕಾರಿ