ಕಾರ್ಕಳದ ವಿಕಾಸ ಕಚೇರಿಯಲ್ಲಿ ಆಯೋಜಿಸಿದ್ದ ವಿಕಾಸ ಉದ್ಯೋಗ ಸೇತು ಮಾಹಿತಿ ಕಾರ್ಯಾಗಾರವನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು. ಪ್ರಮುಖರಾದ ವಿವೇಕ್ ಆಳ್ವ, ಅಶ್ವಥ್ ಎಸ್.ಎಲ್., ದಯಾನಂದ್ ಮೊದಲಾದವರಿದ್ದರು. 
ಉಡುಪಿ

ಸಿಕ್ಕ ಅವಕಾಶ ನಿಭಾಯಿಸಿದಾಗ ಯಶಸ್ಸು

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಸಿಕ್ಕ ಅವಕಾಶಗಳನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ನಿಭಾಯಿಸಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಈಗಾಗಲೇ ಈ ಉದ್ಯೋಗ ಮೇಳಕ್ಕೆ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಣಿ ವಾಡಿಕೊಂಡಿದ್ದು, ಈ ಪೈಕಿ 300ಕ್ಕೂ ಹೆಚ್ಚು ಇಂಜಿನಿಯರಿಂಗ್ ಪದವೀಧರರು ಹೆಸರು ನೋಂದಾಯಿಸಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಸುರಕ್ಷತೆ ದೃಷ್ಟಿಯಿಂದ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ವಿಕಾಸ ಸೇವಾ ಸಂಸ್ಥೆಯ ವತಿಯಿಂದ ಕಾರ್ಕಳದ ವಿಕಾಸ ಕಚೇರಿಯಲ್ಲಿ ಆಯೋಜಿಸಿದ್ದ ವಿಕಾಸ ಉದ್ಯೋಗ ಸೇತು ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನದ ಅಂಗವಾಗಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಸದಾ ಸಕಾರಾತ್ಮಕ ಮನೋಭಾವ ಹೊಂದಿರಬೇಕು. ಕೇವಲ ಪ್ರಮಾಣಪತ್ರಕ್ಕಾಗಿ ಶಿಕ್ಷಣ ಪಡೆಯದೆ, ಕೌಶಲ ಮತ್ತು ತಾಳ್ಮೆ ಬೆಳೆಸಿಕೊಳ್ಳುವುದು ಮುಖ್ಯ. ಶಾಸಕರ ನೇತೃತ್ವದಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಶ್ಲಾನೀಯ ಎಂದರು.

ಕ್ರಿಯೇಟಿವ್ ಕಾಲೇಜಿನ ಸಹಸಂಸ್ಥಾಪಕ ಅಶ್ವಥ್ ಎಸ್.ಎಲ್., ಫಾಕ್ಸ್‌ಕಾನ್ ಕಂಪನಿ ವ್ಯವಸ್ಥಾಪಕ ದಯಾನಂದ್ ಮಾತನಾಡಿದರು. ರಾಜೇಶ್ ಆಚಾರ್ಯ ಸ್ವಾಗತಿಸಿದರು. ಕರುಣಾಕರ ಕೋಟ್ಯಾನ್ ನಿರೂಪಿಸಿದರು.

ಉದ್ಯೋಗ ಸಂದರ್ಶನಕ್ಕೆ ಪೂರ್ವಸಿದ್ಧತೆ ಅಗತ್ಯ. ಅಭ್ಯರ್ಥಿಗಳು ಶ್ರಮ ವಹಿಸಿ, ಉತ್ತಮ ಕೌಶಲ ಬೆಳೆಸಿಕೊಳ್ಳಬೇಕು. ದೊರೆಯುವ ಪ್ರತಿಯೊಂದು ಅವಕಾಶವನ್ನು ಸದುಪಯೋಗ ಪಡಿಸಿಕೊಂಡರೆ ಉತ್ತಮ ಉದ್ಯೋಗ ಗಳಿಸಲು ಸಾಧ್ಯ.

— ದಯಾನಂದ್ ಫಾಕ್ಸ್‌ಕಾನ್ ಕಂಪನಿ ವ್ಯವಸ್ಥಾಪಕ

ಸಹನೆ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಯಶಸ್ಸಿನ ಮೂಲಮಂತ್ರವಾಗಿದೆ. ಯುವ ಸಮುದಾಯ ಉದ್ಯೋಗ ಪಡೆದು ತಮ್ಮ ಕುಟುಂಬಕ್ಕೆ ಬೆಳಕು ಚೆಲ್ಲುವ ಕಾರ್ಯ ವಾಡಬೇಕು. ಸಿಗುವ ಅವಕಾಶಗಳನ್ನು ಸದ್ಬಳಕೆ ವಾಡಿಕೊಂಡು ಅದರ ಪ್ರತಿಫಲವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ.

— ಅಶ್ವಥ್ ಎಸ್.ಎಲ್. ಕ್ರಿಯೇಟಿವ್ ಕಾಲೇಜಿನ ಸಹಸಂಸ್ಥಾಪಕ