ಮಾಳದಲ್ಲಿರುವ 1616ರ ಅಪೂರ್ವ ಶಿಲಾಶಾಸನ.
ವಿಜಯವಾಣಿ ಸುದ್ದಿಜಾಲ ಕಾರ್ಕಳ
ಮಾಳ ಗ್ರಾಪಂ ವ್ಯಾಪ್ತಿಯ ಮಾಳಚೌಕಿ ಸಮೀಪದ ಶ್ರೀ ಪಾಂಡಿರಾಜ ಪೆರ್ಗಡೆ ಅವರ ಮನೆ ಮುಂಭಾಗದಲ್ಲಿರುವ ಅಪರೂಪದ ಶಿಲಾಶಾಸನವನ್ನು ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ ತಂಡ ಅಧ್ಯಯನ ನಡೆಸಿದೆ.
ಈ ಶಿಲಾಶಾಸನ ಹಿಂದೆ ಧರ್ಮಚಾವಡಿ ಹೆಗ್ಗಡತಿ ಮನೆಯ ದುಗ್ಗಲ್ಲಾಯ ದೈವಗುಂಡದ ಬಳಿ ಇತ್ತು. ಕಾಲಕ್ರಮೇಣ ಮನೆಯ ವಿಸ್ತರಣೆ ಸಂದರ್ಭ ಅದನ್ನು ಸಂರಕ್ಷಿಸಿ ಮನೆಯ ಹೊರಭಾಗದಲ್ಲಿ ಸ್ಥಾಪಿಸಲಾಗಿದೆ ಎಂದು ಪಾಂಡಿರಾಜ ಪೆರ್ಗಡೆ ಹಾಗೂ ರವಿರಾಜ ಪೆರ್ಗಡೆ ತಿಳಿಸಿದ್ದಾರೆ. ಶಾಸನಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯ ಡಾ.ಪಿ.ಸತ್ಯನಾರಾಯಣ ಭಟ್ ಅವರ ಪ್ರಾಥಮಿಕ ಮಾಹಿತಿ ಮೇರೆಗೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಸಂಶೋಧನಾ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಶಾಸನವನ್ನು ಅಧ್ಯಯನ ಮಾಡಿದ್ದು, ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ರಚಿತವಾಗಿರುವ ಈ ಶಿಲಾಶಾಸನ ಒಟ್ಟು 15 ಸಾಲುಗಳನ್ನು ಒಳಗೊಂಡಿದೆ. ಬಾಣಭಟ್ಟನ ಹರ್ಷಚರಿತದಲ್ಲಿ ಉಲ್ಲೇಖವಾಗಿರುವ ಶೈವ ಪ್ರಾರ್ಥನಾ ಶ್ಲೋಕದೊಂದಿಗೆ ಶಾಸನ ಆರಂಭವಾಗಿರುವುದು ವಿಶೇಷ. ಶಾಸನದಲ್ಲಿರುವ ಕಾಲಮಾನದ ಪ್ರಕಾರ ಇದು ಶಾಲಿವಾಹನ ಶಕ 1538ರ ನಳ ಸಂವತ್ಸರ, ವೈಶಾಖ ಶುದ್ಧ ದ್ವಾದಶಿ, ಇಂದುವಾರಕ್ಕೆ ಸೇರಿದ ಶಾಸನವಾಗಿದ್ದು, ಸಾಮಾನ್ಯ ವರ್ಷ 1616ರ ಏ.26ರ ಸೋಮವಾರಕ್ಕೆ ಹೊಂದುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಶಾಸನದಲ್ಲಿ ಮಾಲ್ಲೂರ(ಈಗಿನ ಮಲ್ಲಾರ್) ಪ್ರದೇಶದಲ್ಲಿ ಹಿರಿಯರ ಅನುಮತಿಯೊಂದಿಗೆ ಸಾಂತೈಯನಯ್ಯನ ಪುತ್ರ ಮಲೈಯ ಎಂಬಾತ ಶಾಸನ ಮಾಡಿಸಿದ್ದಾನೆ ಎಂಬ ಉಲ್ಲೇಖವಿದೆ.
ಕ್ಷೇತ್ರ ಅಧ್ಯಯನದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್. ಸಹಕಾರ ನೀಡಿದ್ದಾರೆ. ಈ ಅಧ್ಯಯನ ಕಾರ್ಕಳ ಭಾಗದ ಇತಿಹಾಸ ಮತ್ತು ಪಾರಂಪರಿಕ ಪರಂಪರೆಯ ಕುರಿತು ಹೊಸ ಬೆಳಕು ಚೆಲ್ಲುವ ಸಾಧ್ಯತೆ ಮೂಡಿಸಿದೆ.
ಭೈರವರಸರ ಕಾಲದ ಶಾಸನ?
ಶಾಸನದಲ್ಲಿ ರಾಜನ ಹೆಸರು ಅಥವಾ ಶಾಸನ ಸ್ಥಾಪನೆಯ ಉದ್ದೇಶದ ಸ್ಪಷ್ಟ ಉಲ್ಲೇಖ ಕಂಡುಬರುವುದಿಲ್ಲ. ಆದರೆ ಶಾಸನದ ಕಾಲಘಟ್ಟದಲ್ಲಿ ಕಾರ್ಕಳ ಪ್ರದೇಶ ಭೈರವರಸರ ಆಳ್ವಿಕೆಗೆ ಒಳಪಟ್ಟಿದ್ದರಿಂದ, ಇದು ಅವರ ಕಾಲದ ಶಾಸನವಾಗಿರಬಹುದೆಂದು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.