ಉಡುಪಿಯ ಸರ್ಕಾರಿ ಪ.ಪೂ. ಕಾಲೇಜ್​ನಲ್ಲಿ 'ಅರಿವಿನ ಬೆಳಕು' ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ.ನಾಗರಾಜ ಉದ್ಘಾಟಿಸಿದರು. ಡಾ.ಗಣನಾಥ ಶೆಟ್ಟಿ ಎಕ್ಕಾರು, ಪರಮೇಶ್ವರ ಮೊಗವೀರ, ವಾಸಂತಿ ಅಂಬಲಪಾಡಿ, ದಯಾನಂದ ಡಿ., ಸತೀಶ ಕೊಡುವೂರು ಇದ್ದರು. 
ಉಡುಪಿ

ವಿದ್ಯಾರ್ಥಿಗಳಿಗೂ ಅಗತ್ಯ ಸಂವಿಧಾನದ ಪರಿಜ್ಞಾನ

* ಪ್ರೊ. ನಾಗರಾಜ ಅಭಿಪ್ರಾಯ

* 'ಅರಿವಿನ ಬೆಳಕು' ಉಪನ್ಯಾಸ ಉದ್ಘಾಟನೆ

ಉಡುಪಿ: ಜಾತಿ ಹಾಗೂ ಮತಗಳ ಸಂಕೋಲೆಯ ಮೀರಿ ಶಾಂತಿಯುತ ಮತ್ತು ಸಮಾನತೆಯ ಬದುಕು ಕಟ್ಟಿಕೊಳ್ಳಲು ನಮ್ಮ ದೇಶದ ಸಂವಿಧಾನ ಪ್ರಮುಖ ಕಾರಣ. ಅಂತಹ ಸಂವಿಧಾನ ನಾವು ಹೊಂದಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಜೀವನ ಸಾಗಿಸಲು ಸಂವಿಧಾನದ ಪರಿಜ್ಞಾನ ಅಗತ್ಯ ಎಂದು ಉಡುಪಿಯ ಸರ್ಕಾರಿ ಪ.ಪೂ. ಕಾಲೇಜ್​ನ ಪ್ರಾಂಶುಪಾಲ ನಾಗರಾಜ ಅಭಿಪ್ರಾಯಪಟ್ಟರು.

ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್​ನಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್​ ವತಿಯಿಂದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಮತ್ತು ಸಂವಿಧಾನ ದಿನಾಚರಣೆ ನಿಮಿತ್ತ ಆಯೋಜಿಸಿದ್ದ 'ಅರಿವಿನ ಬೆಳಕು' ಉಪನ್ಯಾಸ ಮಾಲೆ-21 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ವಾಸಂತಿ ಅಂಬಲಪಾಡಿ ಅವರು 'ಕಾರಂತರ ಬರಹಗಳು ಮತ್ತು ಸಾಂವಿಧಾನಿಕ ಮೌಲ್ಯಗಳು' ವಿಷಯ ಕುರಿತು ಮಾತನಾಡಿ, ಕಾರಂತರು ಮಕ್ಕಳಿಗಾಗಿ ಅನೇಕ ಕೃತಿ ಬರೆದಿದ್ದಾರೆ. ಬಾಲವನ ಕಟ್ಟಿ ಅದರ ಮೂಲಕ ಮಕ್ಕಳಿಗೆ ವಿಜ್ಞಾನ ಪ್ರಪಂಚ ಪರಿಚಯಿಸಿದ್ದಾರೆ. ಅವರ ಕಾದಂಬರಿಗಳೂ ಸಹ ಸಾಂವಿಧಾನಿಕ ಮೌಲ್ಯ ತಿಳಿಸುತ್ತದೆ. ಇಂದಿನ ಯುವ ಪೀಳಿಗೆ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಡಾ.ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್​ನ ಉಪನ್ಯಾಸಕ ಪರಮೇಶ್ವರ ಮೊಗವೀರ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ದಯಾನಂದ ಡಿ. ಸ್ವಾಗತಿಸಿದರು. ಟ್ರಸ್ಟ್​ನ ಸದಸ್ಯ ಸತೀಶ ಕೊಡುವೂರು ವಂದಿಸಿದರು.