Ragging 
ಉಡುಪಿ

ಕಾಸರಗೋಡು ಕಾಲೇಜಿನಲ್ಲಿ ವಿದ್ಯಾರ್ಥಿಗೆ ರ‍್ಯಾಗಿಂಗ್

ಕಾಸರಗೋಡು: ನಗರದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ರ‌್ಯಾಗಿಂಗ್ ನಡೆಸಿದ ಆರೋಪದನ್ವಯ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಾದ 13 ಮಂದಿಯನ್ನು ತನಿಖೆಗೊಳಪಡಿಸಿ ಪ್ರಾಂಶುಪಾಲ ವಿ.ಎಸ್.ಅನಿಲ್ ಕುಮಾರ್ ಕಾಲೇಜಿನಿಂದ ಅಮಾನತುಗೊಳಿಸಿದ್ದಾರೆ.
13ರಂದು ಕಾಲೇಜು ಕ್ಯಾಂಪಸ್‌ನಲ್ಲಿ ತಂಡವೊಂದು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯನ್ನು ತಡೆದು ನಿಲ್ಲಿಸಿ ಬೆದರಿಸಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ. ಘಟನೆ ಬಗ್ಗೆ ವಿದ್ಯಾರ್ಥಿ ಪಾಲಕರಿಗೆ ತಿಳಿಸಿದ್ದು ಪ್ರಾಂಶುಪಾಲರಿಗೆ ದೂರು ನೀಡಲಾಗಿತ್ತು. ಕಾಲೇಜು ಅಧಿಕಾರಿಗಳು ಪ್ರಾಥಮಿಕ ತನಿಖೆ ಆಧಾರದಲ್ಲಿ ಆರೋಪಕ್ಕೊಳಗಾದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಆ್ಯಂಟಿ ರ‌್ಯಾಗಿಂಗ್ ಸೆಲ್‌ನಲ್ಲಿ ದೂರನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳಲು ಶಿಫಾರಸು ಮಾಡಿತ್ತು. ರ‌್ಯಾಗಿಂಗ್‌ಗೆ ಒಳಗಾದ ವಿದ್ಯಾರ್ಥಿ ಪೊಲೀಸರಿಗೂ ದೂರು ನೀಡಿದ್ದಾರೆ.