ಉಪ್ಪಿನಂಗಡಿ: ಪುತ್ತೂರಿನ ಹಾರಾಡಿ ಎಂಬಲ್ಲಿ ರಸ್ತೆ ಕಾಮಗಾರಿಯಿಂದ ಬಸ್ ಬದಲಿ ಮಾರ್ಗದಲ್ಲಿ ಸಂಚರಿಸುತ್ತಿರುವ ಕಾರಣ ಪುತ್ತೂರು ಬೊಳ್ವಾರಿನಿಂದ ಬಸ್ಸನ್ನೇರಬೇಕಾದ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ ಕಾರಣ ನಿರ್ವಾಹಕ ಬಸ್ ಪಾಸ್ ನಿರಾಕರಿಸಿದ್ದಾರೆಂದು ವಿದ್ಯಾರ್ಥಿಯೊಬ್ಬ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾನೆ.
ಪುತ್ತೂರಿನಿಂದ ಉಪ್ಪಿನಂಗಡಿಗೆ ಸಂಚರಿಸುವ ಬಸ್ಸುಗಳು ಸಾಮಾನ್ಯವಾಗಿ ಪುತ್ತೂರು-ಬೊಳ್ವಾರ್ ಮಾರ್ಗವಾಗಿ ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುತ್ತವೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಉಪ್ಪಿನಂಗಡಿಗೆ ಹೋಗಲು ಬೊಳ್ವಾರ್ ಜಂಕ್ಷನ್‌ನಲ್ಲಿ ಬಸ್ ಹತ್ತುತ್ತಾರೆ. ಆದರೆ ಬೊಳ್ವಾರ್ ಸಮೀಪದ ಹಾರಾಡಿ ಎಂಬಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಸ್ ಸಹಿತ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಉಪ್ಪಿನಂಗಡಿಯತ್ತ ಸಂಚರಿಸುವ ಬಸ್‌ಗಳು ಬಸ್ ನಿಲ್ದಾಣದಿಂದ ಬದಲಿ ಮಾರ್ಗವಾದ ಎಪಿಎಂಸಿಯಾಗಿ ಕೋಟೇಚಾ ಹಾಲ್ ಬಳಿ ಉಪ್ಪಿನಂಗಡಿ ರಸ್ತೆ ಸಂಪರ್ಕಿಸುವುದರಿಂದ ಪ್ರಯಾಣಿಕರು ನಿಲ್ದಾಣದಿಂದಲೇ ಬಸ್ ಹತ್ತುತ್ತಾರೆ.
ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಪುತ್ತೂರು-ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಪ್ಪಿನಂಗಡಿಗೆ ಪ್ರಯಾಣಿಸಿದ ವಿವೇಕಾನಂದ ಕಾಲೇಜಿನ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿ ಜಿತೇಶ್ ಎನ್. ಮತ್ತಿತರ ನಾಲ್ಕೈದು ವಿದ್ಯಾರ್ಥಿಗಳ ಪಾಸ್ ನಿರಾಕರಿಸಿದ ಕಂಡಕ್ಟರ್, ನಿಮ್ಮ ಬಸ್ ಪಾಸ್‌ನಲ್ಲಿ ಬೊಳ್ವಾರ್‌ನಿಂದ ಪ್ರಯಾಣ ಪ್ರಾರಂಭ ಎಂದು ದಾಖಲಾಗಿದೆ. ಬಸ್ ನಿಲ್ದಾಣದಲ್ಲಿ ಹತ್ತಿರುವುದರಿಂದ ಪೂರ್ಣ ಟಿಕೆಟ್ ದರ ನೀಡಬೇಕೆಂದು ಹೇಳಿ ವಸೂಲಿ ಮಾಡಿದ್ದಾರೆ.
ವಿದ್ಯಾರ್ಥಿಗಳು ಬೊಳ್ವಾರ್‌ನಿಂದ ಬಸ್ ಸಂಚಾರ ಇಲ್ಲವೆಂದು ಮನವರಿಕೆ ಮಾಡಿದರೂ ಕಂಡಕ್ಟರ್ ಒಪ್ಪದ ಕಾರಣ ಪೂರ್ಣ ದರ ನೀಡಿದ್ದಾರೆ. ಈ ಬಗ್ಗೆ ಜಿತೇಶ್ ಮುಖ್ಯಮಂತ್ರಿಗೆ ಹಾಗೂ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ದೂರು ನೀಡಿದ್ದಾರೆ. ರಸ್ತೆ ಕಾಮಗಾರಿಗಾಗಿ ಬದಲಿ ಮಾರ್ಗ ಸೂಚಿಸಲಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಈ ಬದಲಾವಣೆ ಅನ್ವಯಿಸದೆ ಬಸ್ ಪಾಸ್ ಅಮಾನ್ಯ ಮಾಡಿರುವ ಕಾರಣ ಪೂರ್ಣ ಟಿಕೆಕ್ ದರ ನೀಡುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.