ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೀಕಾನದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಮೃತದೇಹ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೇಕಲ ಪಳ್ಳಿಕೆರೆ ಕೀನಾನ ನಿವಾಸಿ, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯ ನೌಕರನಾದ ರಾಜೇಶ್ ಕುಮಾರ್ ಹಾಗೂ ಮಾನ್ಯ ಕಲ್ಬಟ್ಟ ಶಾಲಾ ಶಿಕ್ಷಕಿ ನಿರೀಕ್ಷಾ ದಂಪತಿ ಪುತ್ರ ಧ್ಯಾನ್‌ರಾಜ್ (15) ಮೃತ ಬಾಲಕ. ಈತ ಕಾಸರಗೋಡಿನ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದಾನೆ. ಪರೀಕ್ಷೆಯಲ್ಲಿ ಅಂಕ ಕಡಿಮೆಯಾಗಿರುವುದರಿಂದ ಮನನೊಂದು ಕೃತ್ಯ ಎಸಗಿರಬಹುದು ಎಂದು ಸಂಶಯಿಸಲಾಗಿದೆ. ಬೇಕಲ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ರಿಯೊಂದಿಗೆ ತಾಯಿ ನಾಪತ್ತೆ
ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಫಾತಿಮತ್ ಬುಶ್ರಾ(26) 6ರ ಹರೆಯದ ಪುತ್ರಿಯೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪುತ್ರಿಯೊಂದಿಗೆ ಸಹೋದರಿಯ ಮನೆಗೆ ತೆರಳಿದ್ದ ಫಾತಿಮತ್ ಬುಶ್ರಾ ಅಲ್ಲಿಂದ ಮಂಗಳವಾರ ನಾಪತ್ತೆಯಾಗಿರುವುದಾಗಿ ಉದುಮ ಪಡಿಞೌರ್ ನಿವಾಸಿ ಆಯಿಷತ್ ಮುಸ್ತಾನ ಎಂಬುವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜೂಜು ಅಡ್ಡೆಗೆ ದಾಳಿ, ಐವರ ಬಂಧನ
ಕಾಸರಗೋಡು: ಕುಂಬಳೆ ಸಮೀಪದ ಕೊಯಿಪ್ಪಾಡಿ ಬದ್ರಿಯಾನಗರದ ಕೆಂಪುಕಲ್ಲಿ ಕ್ವಾರಿಯ ಶೆಡ್‌ನಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಲ್ಪಾಡಿ ಮಣ್ಣಂಗುಳಿಯ ಅಹ್ಮದ್ ಸುಲ್ತಾನ್ (49), ಮಂಗಳೂರು ಇಡಪತ್ತುವಿನ ಇಸ್ಮಾಯಿಲ್ ಶರೀಫ್ (53), ಉಳಿಯತ್ತಡ್ಕ ನ್ಯಾಷನಲ್ ನಗರದ ಸರ್ಫಾಜ್ (35), ಬಂಟ್ವಾಳ ಶಾಂತಿಅಂಗಡಿ ಹೊಸನ್ ಶಮೀರ್ (46) ಮತ್ತು ಮಂಗಳೂರು ಅತ್ತಾವರದ ಅಬ್ದುಲ್ ಮಜೀದ್ (40) ಬಂಧಿತರು. ಜೂಜಾಟಕ್ಕೆ ಬಳಸಿದ್ದ 39,200 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡರು.
ಬಿಹಾರದ ಬಾಲಕ ಕಾಸರಗೋಡಿನಲ್ಲಿ ಪತ್ತೆ
ಕಾಸರಗೋಡು: ಬಿಹಾರದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಪತ್ತೆಹಚ್ಚಲಾಗಿದೆ. ಬಿಹಾರದ ಜಿಲ್ಲೆಯೊಂದರಿಂದ ಇತ್ತೀಚೆಗೆ 15ರ ಹರೆಯದ ಬಾಲಕ ನಾಪತ್ತೆಯಾಗಿದ್ದ. ಈ ಬಗ್ಗೆ ಎಲ್ಲ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು. ಶುಕ್ರವಾರ ಸಂಜೆ ಹೊಸ ಬಸ್ ನಿಲ್ದಾಣದಲ್ಲಿದ್ದ ಬಾಲಕನನ್ನು ನಗರ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ವಿಚಾರಿಸಿದಾಗ ಬಾಲಕ ತಾನು ಬಿಹಾರದಿಂದ ಬಂದಿರುವುದಾಗಿ ತಿಳಿಸಿದ್ದು, ಬಳಿಕ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಬಾಲಕನನ್ನು ಪರವನಡ್ಕದ ಸಿಡಬ್ಲುೃಸಿಗೆ ಹಸ್ತಾಂತರಿಸಲಾಗಿದೆ.