ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ
ಬಂಟ್ವಾಳ: ಬೇಸಿಗೆಯ ಬಿಸಿ ಏರುತ್ತಲೇ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಜನರನ್ನು ಕಾಡಲಾರಂಭಿಸಿದೆ. ಪುರಸಭೆ ವ್ಯಾಪ್ತಿಯ ಕೌಡೇಲು ಪ್ರದೇಶದ ನಿವಾಸಿಗಳು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಶಾಶ್ವತ ಪರಿಹಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಮಳೆಗಾಲದಲ್ಲಿ ಮಾತ್ರ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆಡಳಿತ ಮತ್ತು ವಿಪಕ್ಷದ ಮುಖಂಡರು ಕೇರಳ, ದಾವಣಗೆರೆ, ಬಾಗಲಕೋಟೆ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಯಲ್ಲಿ ಸಕ್ರಿಯರಾಗಿದ್ದಾರೆ. ಪುರಸಭೆಯಲ್ಲಿ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದ ಕಾರಣ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ನಮ್ಮ ಹಲವು ವರ್ಷಗಳ ಬೇಡಿಕೆ ಬಗ್ಗೆ ಧ್ವನಿ ಎತ್ತುವವರೇ ಇಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಪಾನ ಹಿಡಿದು ಪ್ರತಿಭಟನೆ: ನೇತ್ರಾವತಿ ನದಿಯಲ್ಲಿ ನೀರು ತುಂಬಿದ್ದರೂ ಕೇವಲ ಐದಾರು ಕಿ.ಮೀ. ದೂರದಲ್ಲಿರುವ ಕೌಡೇಲು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪುರಸಭೆ ಕಚೇರಿ ಎದುರು ಎರಡೆರಡು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಕೊಡಪಾನಗಳನ್ನು ಹಿಡಿದು ಮತ್ತೆ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಸ್ಥಳೀಯ ನಿವಾಸಿ ಇಬ್ರಾಹಿಂ ಕೌಡೇಲು ಹೇಳಿದರು. ಒಂದು ವಾರದ ಹಿಂದೆ ಪುರಸಭೆ ಮಾಜಿ ಅಧ್ಯಕ್ಷ ವಾಸು ಪೂಜಾರಿ ಮತ್ತು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಇಲ್ಲಿಗೆ ಭೇಟಿ ನೀಡಿದ ಪರಿಣಾಮ ನಾಲ್ಕೈದು ದಿನ ನೀರು ಪೂರೈಕೆಯಾಗಿ ಮತ್ತೆ ಸ್ಥಗಿತಗೊಂಡಿದೆ ಎಂದು ಮಹಮ್ಮದ್ ಕೌಡೇಲು ಹೇಳಿದರು.
ಬಾವಿಗಳಲ್ಲೂ ನೀರಿಲ್ಲ
ಈ ಪ್ರದೇಶದಲ್ಲಿ 6 ವರ್ಷಗಳಿಂದ ಬಾವಿ ತೋಡಿದರೂ ನೀರು ಸಿಗುತ್ತಿಲ್ಲ. ಗಿಡಗಳು ಸುಡುಬಿಸಿಲಿಗೆ ಕರಟಿ ಹೋದ ಪರಿಣಾಮ ಬರಡು ಭೂಮಿಯಂತೆ ಗೋಚರಿಸುತ್ತಿದೆ. ಅನೇಕಮ ಮಂದಿ ಮನೆಬಿಟ್ಟು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಮನೆ ಮಾರಾಟ ಮಾಡೋಣ ಎಂದರೆ ನೀರಿನ ಸಮಸ್ಯೆಯಿಂದ ಇಲ್ಲಿಗೆ ಜನರೂ ಬರುತ್ತಿಲ್ಲ ಎಂದು ನಿವಾಸಿ ಹಸಿನಾ ಅಶ್ಫಕ್ ಅಳಲು ತೋಡಿಕೊಂಡರು.
ಶಾಂತಿಗುಡ್ಡೆ, ಬೊಂಡಾಲ, ಜ್ಯೋತಿಬೈಲು, ರಂಗೇಲು ಪ್ರದೇಶಗಳಿಗೆ ಪ್ರತಿದಿನ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕೌಡೇಲು ಪದೇಶಕ್ಕೆ ಯಾಕೆ ಬರುತ್ತಿಲ್ಲ ಎನ್ನುವ ಪ್ರಶ್ನೆಗೆ ಪುರಸಭೆ ಅಧಿಕಾರಿಗಳು ಮೌನವಾಗಿದ್ದಾರೆ. ಇಲ್ಲಿನ 40 ಮನೆಗಳಿಗೆ ಪ್ರತ್ಯೇಕ ಟ್ಯಾಂಕ್ ಅಳವಡಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.