ಮುಳ್ಳೇರಿಯ: ಬೀದಿನಾಯಿಗಳ ಹಾವಳಿ ಮಿತಿಮೀರಿದ್ದರೂ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ಆಕ್ರಮಣಕಾರಿ ಬೀದಿನಾಯಿಗಳನ್ನು ಕೆಲವು ಮಾನದಂಡಗಳ ಅಡಿಯಲ್ಲಿ ಕೊಲ್ಲಬಹುದೆಂಬ ಸುಪ್ರೀಂ ಕೋರ್ಟ್‌ನ ಇತ್ತೀಚಿನ ಮಹತ್ತರ ತೀರ್ಪಿನ ಹೊರತಾಗಿಯೂ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದೆ. ಬೀದಿನಾಯಿಗಳ ದಾಳಿಗೆ ತುತ್ತಾಗುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
10 ವರ್ಷಗಳಲ್ಲಿ ಬೀದಿನಾಯಿಗಳು ಮತ್ತು ಇತರ ಕಾಡುಪ್ರಾಣಿಗಳ ದಾಳಿಗೆ ಕೇರಳ ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಆದರೂ ಸರ್ಕಾರಿ ವ್ಯವಸ್ಥೆ ನಿಷ್ಕ್ರಿಯವಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರೂ, ಸರ್ಕಾರಿ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ.
ನಿರಂತರ ದಾಳಿ, ಚಿರತೆಗಳ ಭಯ
ಇತ್ತೀಚೆಗೆ ತಳಿಪರಂಬದ ಬಕ್ಕಲಂ, ಅಂತೂರಿನಲ್ಲಿ 14 ಮಂದಿ ಮತ್ತು ಚೆರ್ವತ್ತೂರಿನಲ್ಲಿ ನಾಲ್ವರು ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದರು. ಬೀದಿ ನಾಯಿಗಳ ಉಪಟಳದ ಜತೆಗೆ, ಜಿಲ್ಲೆಯಲ್ಲಿ ಚಿರತೆಗಳ ಹಾವಳಿಯೂ ಹೆಚ್ಚಿದ್ದು ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಶಾಲಾ ಮಕ್ಕಳಿಗೂ ಭೀತಿ
ಜಿಲ್ಲೆಯ ಹಲವು ಭಾಗಗಳಲ್ಲಿ ಬೀದಿನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪಿಲಿಕುಂಜೆ ಟೌನ್ ಹಾಲ್, ಕುಂಬಳೆ ಮೀನು ಮಾರುಕಟ್ಟೆ ರಸ್ತೆ, ಉಪ್ಪಳ, ಹೊಸಂಗಡಿ ಮತ್ತು ರಾಜಪುರ ಪ್ರದೇಶದ ಸಮೀಪವಿರುವ ಸ್ಥಳಗಳು ಬೀದಿ ನಾಯಿಗಳ ಪ್ರಮುಖ ತಾಣಗಳಾಗಿವೆ. ಶಾಲೆಗಳು ಪುನರಾರಂಭಗೊಂಡಿದ್ದು ಮಕ್ಕಳು ಶಾಲೆಗೆ ಹೋಗುವಾಗ ಬೀದಿನಾಯಿಗಳು ದಾಳಿ ಮಾಡಬಹುದೆಂಬ ಆತಂಕ ಪಾಲಕರನ್ನು ಕಾಡುತ್ತಿದೆ. ಬೆಳಗ್ಗೆ ಮದರಸಗಳಿಗೆ ಹೋಗುವ ಮಕ್ಕಳ ಸುರಕ್ಷತೆ ಬಗ್ಗೆ ಪಾಲಕರು ಚಿಂತಿತರಾಗಿದ್ದಾರೆ. ಶಾಲಾ ಆವರಣ ಮತ್ತು ನಗರಗಳಲ್ಲಿ ದಾರಿಹೋಕರು ಮತ್ತು ದ್ವಿಚಕ್ರ ವಾಹನ ಸವಾರರ ಮೇಲೆ ನಾಯಿಗಳು ದಾಳಿ ಮಾಡುವುದು ಸಾಮಾನ್ಯ ಎಂಬಂತಾಗಿದೆ.
ಕುಂಬಳೆ ಪಂಚಾಯಿತಿ ಮಾದರಿ ಕ್ರಮ
ಕುಂಬಳೆಯಲ್ಲಿ ಬೀದಿನಾಯಿಗಳ ದಾಳಿ ತೀವ್ರಗೊಂಡ ದೂರಿನ ಮೇರೆಗೆ ಕುಂಬಳೆ ಗ್ರಾಪಂ ಕ್ರಮ ಕೈಗೊಂಡಿದೆ. ಪಂಚಾಯಿತಿ ವ್ಯಾಪ್ತಿಯ ವಿವಿಧ ಪ್ರದೇಶಗಳಿಂದ ಬೀದಿನಾಯಿಗಳನ್ನು ಹಿಡಿದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೊಳಪಡಿಸಿ ಮುಳ್ಳೇರಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತಿದೆ. ಇದಕ್ಕಾಗಿ 3 ಲಕ್ಷ ರೂ. ಖರ್ಚು ಮಾಡಿದೆ. ಕುಂಬಳೆ ಗ್ರಾಪಂನ ಈ ಕ್ರಮ ಇತರ ಗ್ರಾಪಂಗಳಿಗೂ ಮಾದರಿಯಾಗಿದೆ.
ಬೀದಿನಾಯಿಗಳ ಹಾವಳಿ ತೀವ್ರ ಕಳವಳ ಮೂಡಿಸಿದೆ. ಶಾಲಾರಂಭಗೊಂಡಿರುವುದರಿಂದ ಮಕ್ಕಳ ಮೇಲೆ ದಾಳಿ ನಡೆಸುವ ಭಯವಿದೆ. ಮಳೆಗಾಲದ ಕಾರಣ ಆಹಾರ ಲಭ್ಯವಾಗದೆ ಹೆಚ್ಚಿನ ಬೀದಿನಾಯಿಗಳು ಸ್ಥಿಮಿತ ಕಳದುಕೊಂಡು ಸಿಕ್ಕವರಿಗೆಲ್ಲ ಕಚ್ಚುವಂಥ ಘಟನೆ ಈ ಹಿಂದೆ ವರದಿಯಾಗಿರುವುದರಿಂದ ಸ್ಥಳೀಯಾಡಳಿತಗಳು ಶೀಘ್ರ ಕ್ರಮ ಕೈಗೊಳ್ಳಬೇಕು.
— ವಿಷ್ಣು ಪ್ರಸಾದ್ ಮುಳ್ಳೇರಿಯ, ವ್ಯಾಪಾರಿ