ಕುಕ್ಕೆಯ ಬಸ್ ನಿಲ್ದಾಣದಲ್ಲಿ ಜಾನುವಾರುಗಳು ಕಸದ ಬುಟ್ಟಿ ಜಾಲಾಡುತ್ತಿರುವುದು. 
ಉಡುಪಿ

ಕುಕ್ಕೆ ಬಸ್ ನಿಲ್ದಾಣದಲ್ಲಿ ಬಿಡಾಡಿ ದನಗಳ ಹಾವಳಿ

ಸುಬ್ರಹ್ಮಣ್ಯ: ಸಹಸ್ರಾರು ಭಕ್ತರು ಆಗಮಿಸುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯೇ ಸವಾಲಾಗಿದೆ. ಬಿಡಾಡಿ ದನಕರುಗಳು ನಿಲ್ದಾಣದಲ್ಲಿರುವ ಕಸದ ಬುಟ್ಟಿಯನ್ನೆಲ್ಲ ಜಾಲಾಡಿ ಕಸವನ್ನು ಅಲ್ಲಲ್ಲಿ ಚೆಲ್ಲುತ್ತಿದ್ದು ಇವುಗಳ ಹಾವಳಿ ಮಿತಿಮೀರಿದೆ.
ನಿಲ್ದಾಣವನ್ನು ಸ್ವಚ್ಛವಾಗಿ ಇಡುವ ಉದ್ದೇಶದಿಂದ ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇರಿಸಲಾಗಿದೆ. ಪ್ರಯಾಣಿಕರು ಕಸದ ಬುಟ್ಟಿಯಲ್ಲಿ ಎಸೆಯುವ ಕಸವನ್ನೆಲ್ಲ ಬಿಡಾಡಿ ದನಕರುಗಳು ಎಳೆದು ಹಾಕಿ ಅದರಲ್ಲಿದ್ದ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ಎಲ್ಲೆಂದರಲ್ಲಿ ಹರಡುತ್ತಿವೆ. ರಾತ್ರಿಯಿಂದ ಬೆಳಗಿನ ಜಾವದ ತನಕ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಬಸ್‌ಗಳಿಗೆ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ.
ರಾತ್ರಿ ಹೊತ್ತಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಾತ್ರಿ ಹೊತ್ತು ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಬೇಕು. ಅಲ್ಲದೆ ದಿನದ 24 ಗಂಟೆಯೂ ಸ್ವಚ್ಛತಾ ಕೆಲಸಗಾರರು ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.