ಪಡುಕುಡೂರು ಶಾಲೆ ಬಳಿ ರಸ್ತೆ ಹದಗೆಟ್ಟಿರುವುದು. 
ಉಡುಪಿ

ಇನ್ನೂ ಬಗೆಹರಿಯದ ರಸ್ತೆ ಸಮಸ್ಯೆ

ಇಂದಿರಾ ಎನ್ ಕೆ

ಹೆಬ್ರಿ: ಖಜಾನೆ ಪಡುಕುಡೂರು ಮುನಿಯಾಲು ಮುಖ್ಯ ರಸ್ತೆಯ ಪಡುಕುಡೂರು ಶಾಲೆ ಬಳಿ ಆಗಿರುವ ರಸ್ತೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಕೆಲ ದಿನಗಳ ಹಿಂದೆ ಪಿಕ್ ಅಪ್ ವಾಹನವೊಂದು ಕಂದಕಕ್ಕೆ ಉರುಳುವ ಹಂತಕ್ಕೆ ತಲುಪಿತ್ತು. ಸ್ಥಳೀಯರು ವಾಹನವನ್ನು ಎಳೆದು ಅಪಾಯದಿಂದ ತಪ್ಪಿಸಿದ್ದಾರೆ.
ಕೆಲವೊಮ್ಮೆ ಈ ರಸ್ತೆಯಲ್ಲಿ ಬರುವವರಿಗೆ ಕಂದಕದ ಅರಿವಾಗದೆ ವಾಹನ ಸಿಲುಕಿಕೊಳ್ಳುತ್ತಿದೆ.
ಪಡುಕುಡೂರು ರಸ್ತೆ ಸಮಸ್ಯೆ ಬಗ್ಗೆ ಭಾರವಿ ಶೆಟ್ಟಿ, ಭುಜಂಗ ಶೆಟ್ಟಿ ಮತ್ತು ಪ್ರಸನ್ನ ಶೆಟ್ಟಿ ನೇತೃತ್ವದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರಿಗೆ ಮನವರಿಕೆ ಮಾಡಿದ್ದರು. ರಸ್ತೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದರೂ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ.

ಅನುದಾನ ಬಿಡುಗಡೆಯಾದ ಕೂಡಲೆ ರಸ್ತೆ ಅಭಿವೃದ್ಧಿಗೆ ಸೂಕ್ತ ಕ್ರಮ ವಹಿಸುತ್ತೇವೆ. ಸ್ಥಳೀಯರು ಸಹಕಾರ ನೀಡಬೇಕು.

— ತ್ರಿನೇಶ್ವರ, ಎಇಇ, ಲೋಕಪಯೋಗಿ ಇಲಾಖೆ, ಕಾರ್ಕಳ

ರಸ್ತೆ ಸಮಸ್ಯೆ ಶೀಘ್ರ ಪರಿಹಾರವಾಗಬೇಕು. ರಸ್ತೆಯಲ್ಲಿ ಸಂಚರಿಸುವುದೇ ಅತ್ಯಂತ ಕಷ್ಟವಾಗಿದೆ.

— ಭಾರವಿ ಶೆಟ್ಟಿ ಪಟೇಲರ ಮನೆ ಪಡುಕುಡೂರು