ಉಡುಪಿ: ಪ್ರಸ್ತುತವಾಗಿ ಮಳೆಯ ಪ್ರಮಾಣ ತುಂಬ ಕಡಿಮೆಯಾಗಿದ್ದು ನದಿಗಳಲ್ಲಿ ನೀರಿನ ಹರಿವು ಇಳಿಕೆಯಾಗಿದೆ. ಹೀಗಾಗಿ ಎಲ್ಲರೂ ಮಿತವಾಗಿ ನೀರಿನ ಬಳಕೆ ಮಾಡಬೇಕಿದೆ. ಬಡಗಬೆಟ್ಟು ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ 24×7 ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ತಿಳಿಸಿದರು.
ಉಡುಪಿ ತಾಲೂಕಿನ ಮಹಾತ್ಮ ಗಾಂಧಿ 80 ಬಡಗಬೆಟ್ಟು ಗ್ರಾಪಂನಲ್ಲಿ ಜಲ ಅರ್ಪಣಾ ದಿವಸ ಹಾಗೂ ಗಾಂಧೀಜಿ ಜಯಂತಿ ನಿಮಿತ್ತ ಶುಕ್ರವಾರ (ಅ.2) ಆಯೋಜಿಸಿದ್ದ "ಮಹಾತ್ಮಾ ಗಾಂಧಿ ಸುಧಾರಣೋತ್ಸವ, ಜನರ ಯೋಜನಾ ಅಭಿಯಾನ' (ಸಬ್ ಕಿ ಯೋಜನಾ&ಸಬ್ ಕಿ ವಿಕಾಸ್) ಎಂಬ ವಿಶೇಷ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.
ಗ್ರಾಮಸ್ಥರಿಗೆ ಕುಡಿಯುವ ನೀರಿನ ಕಾರ್ಯಾಚರಣೆ, ನಿರ್ವಹಣೆಯ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಕುಡಿಯುವ ನೀರಿನ ಎಫ್ಟಿಕೆ ಪರೀಕ್ಷಾ ವರದಿ ಮಂಡಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಹರ್ ಘರ್ ಜಲ್, ನಶಾಮುಕ್ತ ಹಾಗೂ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿ ಎಂದು ಘೋಷಿಸಲಾಯತು. ವಿಬಿಜಿ ರಾಮ್ ಜಿ ಯೋಜನೆಯ ಮಾಹಿತಿ ನೀಡಲಾಯಿತು.
ಗ್ರಾಪಂ ಆಡಳಿತಾಧಿಕಾರಿ ಡಾ. ಸಂದೀಪಕುಮಾರ್, ಇಂಜಿನೀಯರ್ ರಮೇಶ್, ಪಿಡಿಒ ವಿರೂಪಾಕ್ಷಯ್ಯ ಕುಲಕರ್ಣಿ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಕೇಶವ್ ಕೋಟ್ಯಾನ್, ನಿಕಟಪೂರ್ವ ಉಪಾಧ್ಯಕ್ಷೆ ರೂಪಾ ನಾಯಕ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಾಂತಾ ನಾಯಕ್, ಎಂಐಎಸ್ ಕೋ&ಆರ್ಡಿನೇಟರ್ ಕಿರಣ್, ಆರೋಗ್ಯಾಧಿಕಾರಿ ವಸಂತಕುಮಾರ್, ನೀರು ಪ್ರಯೋಗಾಲಯದ ರಶ್ಮಾ ವಿಕ್ರಮ್, ಗ್ರಾಪಂ ಮಾಜಿ ಉಪಾಧ್ಯೆಯರಾದ ನಿರುಪಮಾ ಹೆಗ್ಡೆ, ಮಾಲತಿ ನಾಯ್ಕ್, ಮಾಜಿ ಸದಸ್ಯೆ ಜ್ಯೋತಿ ಡಿ. ಪ್ರಭು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.