ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ. 
ಉಡುಪಿ

ಪಿಆರ್​ಸಿ ಆದೇಶ ಸಂವಿಧಾನ ಬಾಹಿರ

* ಉಡುಪಿ ಯಶ್​ಪಾಲ್​ ಸುವರ್ಣ ಆಕ್ರೋಶ 

* ಶಾಶ್ವತ ನಿವಾಸಿ ಪ್ರಮಾಣಪತ್ರ ನಿರ್ಧಾರ ಕೈಬಿಡಿ

* ದೇಶದ ಆಂತರಿಕ ಭದ್ರತೆಗೆ ದಕ್ಕೆ, ಅಪಾಯ

ಉಡುಪಿ: ರಾಜ್ಯ ಕಾಂಗ್ರೆಸ್​ ಸರ್ಕಾರ ತನ್ನ ವೋಟ್​ ಬ್ಯಾಂಕ್​ ರಾಜಕೀಯಕ್ಕಾಗಿ ಕಾನೂನು ನಿಯಮಾವಳಿ ಮೀರುತ್ತಿದೆ. ಬಾಂಗ್ಲಾ ಅಕ್ರಮ ವಲಸಿಗರನ್ನು ರಕ್ಷಿಸಿ ಅವರನ್ನು ಮತದಾರ ಪಟ್ಟಿಯಲ್ಲಿ ಮುಂದುವರಿಸಲು ಸಂವಿಧಾನ ಬಾಹಿರವಾಗಿ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್​ಸಿ) ನೀಡಲು ಆದೇಶಿಸಿದೆ. ಇದು ದೇಶದ ಆಂತರಿಕ ಭದ್ರತೆಗೆ ಅಪಾಯ ಉಂಟಾಗಲಿದೆ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್​ಐಆರ್​ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆ ಸಂದರ್ಭದಲ್ಲಿಯೇ ನುಸುಳುಕೋರರಿಗೆ ಪ್ರಮಾಣಪತ್ರ ಒದಗಿಸಿ ಮತದಾನದ ಹಕ್ಕು ನೀಡುವ ಷಡ್ಯಂತ್ರ ನಡೆಸಿ, ರಾಜಕೀಯ ಲಾಭ ಪಡೆದುಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಮುಂದಾಗಿದ್ದಾರೆ. ತನ್ಮೂಲಕ  ದೇಶ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಿ ಕರ್ನಾಟಕವನ್ನೂ ಭಯೋತ್ಪಾದಕರ ಸ್ವರ್ಗ ಮಾಡಲು ಹೊರಟಿದ್ದಾರೆ ಎಂದು ಯಶ್​ಪಾಲ್​ ಆರೋಪಿಸಿದ್ದಾರೆ.

ಎಸ್​ಐಆರ್​ನಿಂದ ಕಾಂಗ್ರೆಸ್​ಗೆ ಭಯ

ಮತದಾರ ಪಟ್ಟಿಯಿಂದ ಅನರ್ಹ ಮತದಾರರನ್ನು ಕೈಬಿಟ್ಟು ಪಾರದರ್ಶಕವಾಗಿ ಚುನಾವಣೆ ನಡೆಸಲು ಆಯೋಗ ಎಸ್​ಐಆರ್​ ಪ್ರಕ್ರಿಯೆ ಆರಂಭಿಸಿದೆ. ಅದರಿಂದ ಭಯಭೀತವಾಗಿರುವ ಕಾಂಗ್ರೆಸ್​, ಇದೀಗ ಅನರ್ಹರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಗೆ ಮುಂದಾಗಿದೆ. ರಾಜ್ಯ ಸರ್ಕಾರವೇ ದೇಶ ವಿರೋಧಿ ಶಕ್ತಿಗಳಿಗೆ ರತ್ನಗಂಬಳಿ ಹಾಕಿ ಸ್ವಾಗತಿಸುತ್ತಿದೆ.

ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯ ಎಚ್ಚರಿಕೆ

ಪಶ್ಚಿಮ ಬಂಗಾಳ ಸಹಿತ ವಿವಿಧ ರಾಜ್ಯದಲ್ಲಿ ಎಸ್​ಐಆರ್​ ಪ್ರಕ್ರಿಯೆಯಿಂದ ಲಕ್ಷಾಂತರ ಮಂದಿ ಅನರ್ಹ ಮತದಾರರನ್ನು ಕೈಬಿಡಲಾಗಿದೆ. ಈ ಬೆಳವಣಿಗೆಯ ಬಳಿಕ ಮತಾಂಧ, ದೇಶ ವಿರೋಧಿ ಶಕ್ತಿಗಳನ್ನು ಓಲೈಕೆ ಮಾಡಲು ಪಿಆರ್​ಸಿ ಆದೇಶ ಹೊರಡಿಸಲಾಗಿದೆ. ಈ ನಿರ್ಧಾರವನ್ನು ಸಿಎಂ ಡಿಕೆಶಿ ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯ ಮೂಲಕ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.