ಜಿಲ್ಲಾಧ್ಯಕ್ಷ ಪ್ರವಿಣ್​ ಎಂ. ಪೂಜಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಉಡುಪಿ

ಆ. 27ಕ್ಕೆ ರಾಜ್ಯಮಟ್ಟದ ಭಾಷಣ ಸ್ಪರ್ಧೆ, ಗುರು ಸಂದೇಶ ಸಾಮರಸ್ಯ ಜಾಥಾ

ಗೋಪಾಲಕೃಷ್ಣ ಪಾದೂರ್
ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಆ.30ರಂದು ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಗುರು ಸಂದೇಶ ಸಾಮರಸ್ಯ ಜಾಥಾ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರವಿಣ್​ ಎಂ. ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 9.30ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸುರೇಶ್​ ಶೆಟ್ಟಿ ಗುರ್ಮೆ, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್​ ಮೊದಲಾದವರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1ಕ್ಕೆ ಬಹುಮಾನ ವಿತರಣೆ ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್​, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್​, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸುನೀಲ್​ ಕುಮಾರ್​, ಯಶ್​ಪಾಲ್​ ಸುವರ್ಣ, ಮಾಜಿ ಸಚಿವರಾದ ವಿನಯ್​ ಕುಮಾರ್​ ಸೊರಕೆ, ಪ್ರಮೋದ್​ ಮಧ್ವರಾಜ್​, ಉದ್ಯಮಿ ಪ್ರಸಾದ್​ ರಾಜ್​ ಕಾಂಚನ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

ಸಾಮರಸ್ಯ ಜಾಥಾ
ಈ ಸಂದರ್ಭದಲ್ಲಿ ಸಾಮಾಜಿಕ ಸಾಮರಸ್ಯ, ಮಾನವೀಯತೆ, ಸಮಾನತೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಬನ್ನಂಜೆ ಬಿಲ್ಲವ ಸಂಘದಿಂದ ಹೊರಟು ಕಟಪಾಡಿಯ ಶ್ರೀ ವಿಶ್ವನಾಥ ಕ್ಷೇತ್ರದವರೆಗೆ ಗುರು ಸಂದೇಶ ಸಾಮರಸ್ಯ ಜಾಥಾ ಹಮ್ಮಿಕೊಳ್ಳಲಾಗಿದೆ. ಸುಮಾರು 2,000 ವಾಹನಗಳಲ್ಲಿ 10,000 ಮಂದಿ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ನಾರಾಯಣ ಗುರು ಜಯಂತಿಗೆ ಸರ್ಕಾರ ರಜೆ ಘೋಷಿಸಬೇಕು ಹಾಗೂ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಗೌರವಾಧ್ಯಕ್ಷ ದಿವಾಕರ ಸನಿಲ್​, ಗೌರವ ಸಲಹೆಗಾರ ಸುಧಾಕರ ಡಿ. ಅಮೀನ್​, ಉಪಾಧ್ಯಕ್ಷರಾದ ವಿಜಯ ಕೋಟ್ಯಾನ್​ ಪಿತ್ರೋಡಿ ಹಾಗೂ ಎಂ. ಮಹೇಶ್​ ಕುಮಾರ್​ ಮಲ್ಪೆ ಉಪಸ್ಥಿತರಿದ್ದರು.