ಅಡ್ವೆ ಬಳಿ ಹದಗೆಟ್ಟಿರುವ ರಾಜ್ಯ ಹೆದ್ದಾರಿ.
ನಂದಿಕೂರು ಕೈಗಾರಿಕಾ ಪ್ರದೇಶ ಸೇರಿದಂತೆ ಕಾರ್ಕಳ ಕಡೆ ದಿನನಿತ್ಯ ಭಾರಿ ವಾಹನಗಳ ಸಹಿತ ಸಾವಿರಾರು ವಾಹನಗಳು ಸಂಚರಿಸುವ ಪಡುಬಿದ್ರಿ-ಕಾರ್ಕಳ(ಚಿಕ್ಕಲಗುಡ್ಡ) ರಾಜ್ಯ ಹೆದ್ದಾರಿ ಹೊಂಡಗುಂಡಿಗಳಿಂದ ತುಂಬಿ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ.
ಮಳೆಗಾಲ ಪೂರ್ವದಲ್ಲಿ ಅಲ್ಲಲ್ಲಿ ದುರಸ್ತಿ ಕಂಡ ಲೋಕೋಪಯೋಗಿ ವ್ಯಾಪ್ತಿಗೆ ಸೇರಿರುವ ಈ ಭಾಗದ ಪ್ರಮುಖ ಹೆದ್ದಾರಿ ಇಕ್ಕೆಲಗಳಲ್ಲಿನ ಚರಂಡಿ ನಿರ್ವಹಣೆಯಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ನಂದಿಕೂರು, ಅಡ್ವೆಬೈಲು, ಅಡ್ವೆ ಜಂಕ್ಷನ್, ಕಾಂಜರಕಟ್ಟೆ, ಬೆಳ್ಮಣ್, ನಿಟ್ಟೆ ಪ್ರದೇಶದಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿವೆ. ಈ ಪ್ರದೇಶದಲ್ಲಿ ಇದ್ದ ರಸ್ತೆ ಉಬ್ಬುಗಳನ್ನು ತೆರವು ಮಾಡಿ ದುರಸ್ತಿ ಕಾರ್ಯ ಮಾಡಲಾಗಿತ್ತು. ಇದೀಗ ಅದೇ ಪ್ರದೇಶದಲ್ಲಿ ಹೊಂಡಗಳು ಕಾಣಿಸಿಕೊಂಡಿವೆ.
ಗುತ್ತಿಗೆದಾರರ ಹಿಂದೇಟು
ಹೆದ್ದಾರಿ ನಿರ್ಮಾಣದ ಬಳಿಕ ಇಕ್ಕೆಲಗಳಲ್ಲಿನ ಚರಂಡಿ ಸಮರ್ಪಕವಾಗಿ ದುರಸ್ತಿ ಕಾಣದೆ ಹೂಳು ತುಂಬಿ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ನೀರು ಸರಬರಾಜು ಪೈಪ್, ಖಾಸಗಿ ಕಂಪನಿಗಳ ಕೇಬಲ್‌ಗಳನ್ನು ಮೇಲ್ಮಟ್ಟದಲ್ಲಿಯೇ ಅಳವಡಿಸಿರುವ ಪರಿಣಾಮ ಗುತ್ತಿಗೆದಾರರು ಚರಂಡಿ ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲವೆಡೆ ರಸ್ತೆಬದಿಯಲ್ಲಿ ಮಣ್ಣು ಸುರಿದ ಪರಿಣಾಮ ಕೆಸರುಮಯವಾಗಿದ್ದು, ಪಾದಚಾರಿ ಸಹಿತ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳು ಸಂಚರಿಸಲು ಸಂಕಷ್ಟಪಡುವಂತಾಗಿದೆ. ಮಳೆಗಾಲದಲ್ಲಿಯೂ ಕೇಬಲ್ ಕಂಪನಿಯಿಂದ ಅಲ್ಲಲ್ಲಿ ಅಗೆದು ಕೇಬಲ್ ಅಳವಡಿಸುವ ಕಾರ್ಯವೂ ನಡೆಯುತ್ತಿದೆ.
ಕೊಂಕಣ ರೈಲ್ವೆ ಮೇಲ್ಸೇತುವೆಯಲ್ಲಿ ಹೊಂಡ
ಬೇಸಿಗೆ ಆರಂಭದಲ್ಲಿ ಸಂಪೂರ್ಣವಾಗಿ ದುರಸ್ತಿ ಕಂಡ ರಾಜ್ಯ ಹೆದ್ದಾರಿಯ ನಂದಿಕೂರು ಭಾಗದಲ್ಲಿ ಕೊಂಕಣ ರೈಲ್ವೆ ವ್ಯಾಪ್ತಿಗೆ ಸೇರಿರುವ ಮೇಲ್ಸೇತುವೆಯಲ್ಲಿ ಮತ್ತೆ ಹೊಂಡ ಕಾಣಿಸಿಕೊಂಡಿದೆ. ಸೇತುವೆ ಅಡಿಪಾಯದ ಕಾಂಕ್ರೀಟ್ ಬಿರುಕು ಬಿಟ್ಟಿದ್ದು, ಲೋಕೋಪಯೋಗಿ ಇಲಾಖೆಗೆ ವಾರ್ಷಿಕ ಮೂರ‌್ನಾಲ್ಕು ಬಾರಿ ದುರಸ್ತಿ ಮಾಡುವುದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಇನ್ನೂ ಸಾಧ್ಯವಾಗಿಲ್ಲ. ಸತತ ಎರಡು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಮರು ಡಾಂಬರೀಕರಣಗೊಂಡರೂ ಮತ್ತೆ ಹೊಂಡ ಕಾಣಿಸಿರುವುದು ಲೋಕೋಪಯೋಗಿ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಹಲವು ವರ್ಷಗಳಿಂದ ಸೇತುವೆ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣದೆ ಜನ ಹಾಗೂ ವಾಹನ ಸವಾರರು ಹೈರಾಣಾಗುವಂತಾಗಿದೆ. ನಿರಂತರವಾಗಿ ಭಾರಿ ವಾಹನಗಳ ಸಂಚಾರದಿಂದ ಹದಗೆಟ್ಟು ದುರಸ್ತಿ ಮಾಡಿದರೂ ಹೊಂಡಮಯವಾಗುವ ಸೇತುವೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ರೈಲ್ವೆ ಹಾಗೂ ಲೋಕೋಪಯೋಗಿ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸುಮಾರು ದಶಕದ ಹಿಂದೆ ದ್ವಿಪಥವಾಗಿ ನಿರ್ಮಾಣವಾದ ಈ ರಾಜ್ಯ ಹೆದ್ದಾರಿ ಇತ್ತೀಚೆಗಿನವರೆಗೂ ಸುಸ್ಥಿಯಲ್ಲಿತ್ತು. ಇಡೀ ಜಿಲ್ಲೆಯಲ್ಲೇ ಇದು ಉತ್ತಮ ಹೆದ್ದಾರಿ ಎಂಬ ಪ್ರಶಂಸೆಗೂ ಪಾತ್ರವಾಗಿತ್ತು. ತ್ತಮ ಹೆದ್ದಾರಿ ನಿರ್ಮಾಣವಾದ ಬಳಿಕ ಅಪಘಾತಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹಂಪ್ಸ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ವಾಹನಗಳ ಸುಗಮ ಸಂಚಾರಕ್ಕೆ ಅಲ್ಲಲ್ಲಿ ಇರುವ ಈ ಹಂಪ್ಸ್‌ಗಳು ಸಮಸ್ಯೆಯಾಗಿ ವ್ಯಾಪಕ ಟೀಕೆ ಮತ್ತು ವಿರೋಧ ವ್ಯಕ್ತವಾದ ಬಳಿಕ ಅವುಗಳನ್ನು ತೆರವುಗೊಳಿಸಿ ಆ ಸ್ಥಳಗಳಿಗೆ ಡಾಂಬರು ಹಾಕಿ ಪ್ಯಾಚ್‌ವರ್ಕ್ ಮಾಡಿದ್ದರು. ಈ ಪ್ಯಾಚ್‌ವರ್ಕ್ ಮಾಡಿದ ಸ್ಥಳಗಳಲ್ಲಿ ಪ್ರತಿ ಮಳೆಗಾಲದಲ್ಲಿ ಹೊಂಡ ಬೀಳುವುದು ಬೇಸಿಗೆಯಲ್ಲಿ ಅದನ್ನು ದುರಸ್ತಿ ಮಾಡುವುದು ನಡೆಯುತ್ತಾ ಬಂದಿದೆ. ಆದರೆ ಈ ವರ್ಷ ಅಡ್ವೆ ಮತ್ತಿತರೆಡೆಗಳಲ್ಲಿ ಹಿಂದೆ ಹಂಪ್ಸ್ ಇದ್ದ ಜಾಗದಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿವೆ. ಸಮರ್ಪಕ ನಿರ್ವಹಣೆಯಿಲ್ಲದೆ ಹೆದ್ದಾರಿಯಲ್ಲೂ ಅಲ್ಲಲ್ಲಿ ಹೊಂಡಗಳು ಉಂಟಾಗಿ ಚೆನ್ನಾಗಿದ್ದ ರಸ್ತೆ ಹಾಳಾಗುತ್ತಿರುವುದು ಜನರಿಗೆ ಸಂಕಟವುಂಟು ಮಾಡುತ್ತಿದೆ.
ಹೊಂಡ ಬಿದ್ದ ಕಡೆ ಜಲ್ಲಿಹುಡಿ ಬಳಸಿ ತಾತ್ಕಾಲಿಕ ಮುಚ್ಚುವ ಕಾರ್ಯ ನಡೆಸಲಾಗಿದೆ. ಮಳೆ ಕಡಿಮೆಯಾದ ತಕ್ಷಣ ಹೊಂಡ ಮುಚ್ಚಲು ಕ್ರಮಕೈಗೊಳ್ಳಲಾಗುವುದು. ನಂದಿಕೂರು ರೈಲ್ವೆ ಮೇಲ್ಸೇತುವೆ ಅಡಿಪಾಯ ಕಾಂಕ್ರೀಟ್ ಸಂಪೂರ್ಣವಾಗಿ ಬಿರುಕುಬಿಟ್ಟಿದ್ದು, ಹೊಸದಾಗಿ ಸೇತುವೆ ನಿರ್ಮಾಣವಾಗಬೇಕಿದೆ. ಕೊಂಕಣ ರೈಲ್ವೆ ಇಲಾಖೆ ವ್ಯಾಪ್ತಿಗೆ ಬರುವ ಈ ಸೇತುವೆ ನಿರ್ಮಾಣಕ್ಕೆ ಸರ್ವೇ ನಡೆಸಿ ಲೋಕೋಪಯೋಗಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
— ಮನೋಜ್ ಅಮೀನ್, ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಉಡುಪಿ