ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಎಸ್​ಐಆರ್​ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾಧಕ ಬಿಎಲ್​ಒಗಳಿಗೆ ವಿ.ಅಣ್ಬುಕುಮಾರ್​ ಅಭಿನಂದನಾ ಪತ್ರ ವಿತರಿಸಿದರು. ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​ ಇದ್ದರು. 
ಉಡುಪಿ

ದೋಷರಹಿತ ಮತದಾರರ ಪಟ್ಟಿ ಸಿದ್ಧವಾಗಲಿ

* ಉಡುಪಿ ಜಿಲ್ಲಾಡಳಿತಕ್ಕೆ ವಿ.ಅಣ್ಬುಕುಮಾರ್​ ಸೂಚನೆ

* ಡಿಸಿ ಕಚೇರಿಯಲ್ಲಿ ಎಸ್​ಐಆರ್​ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಪ್ರಜಾಪ್ರಭುತ್ವದ ಅಡಿಪಾಯ ಇನ್ನಷ್ಟು ಭದ್ರಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಕಾರ್ಯ ನಡೆಸುತ್ತಿದೆ. ದೋಷರಹಿತ ಹಾಗೂ ಗುಣಮಟ್ಟದ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸವಾಗಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಿ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅಣ್ಬುಕುಮಾರ್​ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಜು.25) ಆಯೋಜಿಸಿದ್ದ ಎಸ್​ಐಆರ್​ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕುಟುಂಬದವರ ಸಹಿ ಪರಿಗಣನೆ
ಮನೆ ಮನೆಯ ಸಮೀಕ್ಷೆಯ ಸಂದರ್ಭದಲ್ಲಿ ನೀಡಿದ ನಮೂನೆಗಳಲ್ಲಿ 2002ರ ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್​ ಆಗದವರೂ ಸಹ ಫಾಮ್​ರ್ನ ಕೊನೆಯ ಕಾಲಂನಲ್ಲಿ ವೈಯಕ್ತಿಕ ವಿವರ ಭರ್ತಿ ಮಾಡಬಹುದು. ಒಂದೊಮ್ಮೆ ಬಿಎಲ್​ಒಗಳು ಮನೆ ಭೇಟಿಯ ಸಂದರ್ಭದಲ್ಲಿ ಮತದಾರರು ಇಲ್ಲದಿದ್ದಲ್ಲಿ ಅವರ ಪರವಾಗಿ ಕುಟುಂಬದ ಯಾವುದೇ ಒಬ್ಬ ವಯಸ್ಕರು ಸಹಿ ಹಾಕಿ ಗಣತಿ ನಮೂನೆಯನ್ನು ಬಿಎಲ್​ಒಗಳಿಗೆ ನೀಡಬಹುದಾಗಿದೆ ಎಂದರು.

ಶೇ.88.39 ಡಿಜಿಟಲೀಕರಣ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಜಿಲ್ಲೆಯಲ್ಲಿ ಎಸ್​ಐಆರ್​ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಬೂತ್​ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಿಸುವಲ್ಲಿ ಶೇ.100 ಪ್ರಗತಿ ಸಾಧಿಸಿದ್ದಾರೆ. ಜು.25ರ ಸಂಜೆ 4 ಗಂಟೆಯ ವರೆಗೆ ಒಟ್ಟು 9,40,340 ಗಣತಿ ನಮೂನೆ ಡಿಜಿಟಲೀಕರಣಗೊಳಿಸಿದ್ದು, ಶೇ.88.39 ಪ್ರಗತಿಯಾಗಿದೆ. 14,835 ಮತದಾರರು ಮೃತಪಟ್ಟಿದ್ದು, 14,426 ಮತದಾರರು ಕಾಯಂ ಆಗಿ ಬೇರೆಡೆ ಸ್ಥಳಾಂತರ ಆಗಿದ್ದಾರೆ.  5,225 ಮತದಾರರು ತಮ್ಮ ದಾಖಲಾತಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಪ್ರತೀಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಸಹಾಯಕ ಕಮಿಷನರ್​ ರಶ್ಮಿ ಹಾಗೂ ಇನ್ನಿತರ ಅಧಿಕಾರಿಗಳಿದ್ದರು.

ಬಿಎಲ್​ಒಗಳಿಗೆ ಅಭಿನಂದನಾ ಪತ್ರ

ಗಣತಿ ನಮೂನೆಗಳ ಡಿಜಿಟಲೀಕರಣ ಕಾರ್ಯ ಪ್ರಥಮವಾಗಿ ಶೇ.100 ಪೂರ್ಣಗೊಳಿಸಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 125ರ ಬಿಎಲ್​ಒ ಪವಿತ್ರಾ ಪೂಜಾರಿ, ಕುಂದಾಪುರದ ಮತಗಟ್ಟೆ ಸಂಖ್ಯೆ 135ರ ಲಕ್ಷ್ಮೀ ಶೆಡ್ತಿ, ಉಡುಪಿಯ ಮತಗಟ್ಟೆ ಸಂಖ್ಯೆ 33ರ ಪ್ರಸನ್ನಿ, ಕಾಪು ಮತಗಟ್ಟೆ ಸಂಖ್ಯೆ 190ರ ಹೇಮಾ ಪೂಜಾರ್ತಿ, ಕಾರ್ಕಳದ ಮತಗಟ್ಟೆ ಸಂಖ್ಯೆ 41ರ ಜ್ಯೋತಿರಾವ್​ ಸೇರ್ವೆಗಾರ್​ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
"

ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಂದ ಭರ್ತಿ ಮಾಡಿ ಪಡೆದುಕೊಂಡ ಎನ್ಯುಮರೇಷನ್​ ನಮೂನೆಗಳ ಡಿಜಿಟಲೀಕರಣ ಕಾರ್ಯದಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ಇದು ನಿಜಕ್ಕೂ ಮಾದರಿ ಹಾಗೂ ಇನ್ನಿತರ ಜಿಲ್ಲೆಗಳಿಗೆ ಪ್ರೇರಣಾದಾಯಕವಾಗಿದೆ.

— ವಿ.ಅಣ್ಬುಕುಮಾರ್​. ರಾಜ್ಯ ಮುಖ್ಯ ಚುನಾವಣಾಧಿಕಾರಿ.