ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉಡುಪಿ ಡಿಸಿ ಕಚೇರಿಯ ಬಳಿ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾ ಕಟ್ಟಡ ಮತ್ತು ಇನ್ನಿತರ ನಿರ್ಮಾಣ ಕಾರ್ಮಿಕರು ಪ್ರತಿಭಟಿಸಿದರು. ಶಶಿಧರ ಗೊಲ್ಲ, ಚಂದ್ರಶೇಖರ ವಿ., ಸುರೇಶ ಕಲ್ಲಾಗರ, ಸುಭಾಶ್ಚಂದ್ರ ನಾಯಕ ಇತರರಿದ್ದರು. 
ಉಡುಪಿ

ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆ ತಕ್ಷಣ ಆರಂಭಿಸಿ

* ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಪ್ರತಿಭಟನೆ

* ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ

ಉಡುಪಿ: ಕರಾವಳಿ ನಿಯಂತ್ರಣ ವಲಯ (ಸಿಆರ್​ಜಡ್​) ವ್ಯಾಪ್ತಿಯಲ್ಲಿ ತಕ್ಷಣ ಮರಳುಗಾರಿಕೆ ಆರಂಭಿಸಿ ಜನರು ಅನುಭವಿಸುತ್ತರುವ ಮರಳು ಕೊರತೆ ನೀಗಿಸಬೇಕು. ಕೆಂಪುಕಲ್ಲು ಗಣಿಗಾರಿಕೆ, ಸಾಗಾಟದ ಸಮಸ್ಯೆಯೂ ಮಿತಿಮೀರಿದ್ದು ಜಿಲ್ಲಾಡಳಿತ ಕೂಡಲೇ ಪರಿಹರಿಸಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ ಆಗ್ರಹಿಸಿದರು.

ಉಡುಪಿ ಜಿಲ್ಲಾ ಕಟ್ಟಡ ಮತ್ತು ಇನ್ನಿತರ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ (ನ.16) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

9/11ಸಮಸ್ಯೆಯಿಂದ ಕಟ್ಟಡ ನಿರ್ಮಾಣಕ್ಕೆ ತೊಡಕು ಉಂಟಾಗಿದೆ. ಕಟ್ಟ್ಟಡ ಪರವಾನಗಿಗೆ ಕಾರ್ಮಿಕ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡುವ ಪ್ರಕ್ರಿಯೆ ಸರಳಗೊಳಿಸಬೇಕು. ಎಲ್ಲ ಬಗೆಯ ನಿರ್ಮಾಣ ಚಟುವಟಿಕೆ ಸ್ಥಗಿತವಾಗಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ, ದಿನಗೂಲಿ ಕಾರ್ಮಿಕರ ಮೇಲೆ ದುಷ್ಪರಿಣಾಮ ಆಗುತ್ತಿದೆ. ಜನಸಾಮಾನ್ಯರ ಬದುಕು, ಕಾರ್ಮಿಕರ ಉದ್ಯೋಗದ ದೃಷ್ಟಿಯಿಂದ ಸಂಬಂಧತ ಇಲಾಖಾ ಅಧಿಕಾರಿಗಳ ಸಭೆ ತಕ್ಷಣ ಕರೆಯಬೇಕು. ಎಲ್ಲ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಮಣಿಪಾಲದಲ್ಲಿ ಮೆರವಣಿಗೆ

ಸಭೆಗೂ ಪೂರ್ವದಲ್ಲಿ ಮಣಿಪಾಲದ ಕಾಯಿನ್​ ಸರ್ಕಲ್​ನಿಂದ ಮೆರವಣಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಮ್ಮ ವಿವಿಧ ಬೇಡಿಕೆ ಇರುವ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ವಿ., ರಾಜ್ಯ ಕಾರ್ಯದರ್ಶಿ ಸುರೇಶ ಕಲ್ಲಾಗರ, ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ನಾಯಕ, ಕುಂದಾಪುರ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಸಿಐಟಿಯು ಮುಖಂಡ ಎಚ್​. ನರಸಿಂಹ, ಬೈಂದೂರು ತಾಲೂಕು ಸಂಘದ ಗೋಪಾಲಕೃಷ್ಣ, ನಾಗರತ್ನಾ ಪಡುವರಿ, ಕುಂದಾಪುರ ತಾಲೂಕು ಸಂಘದ ಸಂತೋಷ ಹೆಮ್ಮಾಡಿ, ಶ್ರೀನಿವಾಸ ಪೂಜಾರಿ, ಕೃಷ್ಣ ಪೂಜಾರಿ, ಉಡುಪಿ ತಾಲೂಕು ಸಂಘದ ದಯಾನಂದ ಕೋಟ್ಯಾನ್​, ನಾಗೇಶ ಕಾರ್ಕಳ, ರಾಮ ಸಾಲಿಯಾನ್​, ರಾಮ ಕಾರ್ಕಡ, ಅಲೆಕ್ಸಾಂಡರ್​, ಮರ್ಲ ದೇವಾಡಿಗ ಇನ್ನಿತರರು ಉಪಸ್ಥಿತರಿದ್ದರು.