ವಿಜಯವಾಣಿ ಸುದ್ದಿಜಾಲ ಕುಂದಾಪುರ
ಗುಜ್ಜಾಡಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಗುಜ್ಜಾಡಿ ಗ್ರಾಪಂ 2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ನಡೆಯಿತು.
ಗ್ರಾಪಂ ಸಿಬ್ಬಂದಿಯೊಬ್ಬರು ವಿದ್ಯುತ್ ಕಂಬ ಹತ್ತಿ ದಾರಿದೀಪ ದುರಸ್ತಿ ಮಾಡುತ್ತಿದ್ದು, ಇದಕ್ಕೆ ಗ್ರಾಪಂ ಅಥವಾ ಮೆಸ್ಕಾಂ ಅನುಮತಿ ನೀಡಿದೆಯೇ? ಎಂದು ದಾಮೋದರ ಮೊಗವೀರ, ಅಕ್ಷಯ್ ಮತ್ತು ಮಂಜುನಾಥ ಪ್ರಶ್ನಿಸಿ ಗ್ರಾಪಂ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. ಉತ್ತರಿಸಿದ ಪಿಡಿಒ ಶೋಭಾ ಮತ್ತು ಆಡಳಿತ ಅಧಿಕಾರಿ ಸಂಜೀವ ಅರಕೇರಿ, ಗ್ರಾಪಂ ಸಿಬ್ಬಂದಿ ವಿದ್ಯುತ್ ಕಂಬ ಹತ್ತುವಂತಿಲ್ಲ ಎಂದು ಸ್ಪಷ್ಟವಾಗಿ ಸಿಬ್ಬಂದಿಗೆ ಸೂಚಿಸಲಾಗಿದೆ. ಗ್ರಾಪಂನಲ್ಲಿ ಅನುದಾನ ಇಲ್ಲದಿರುವುದರಿಂದ ಹೊಸ ದಾರಿದೀಪ ಅಳವಡಿಕೆ ಸಾಧ್ಯವಿಲ್ಲ. ಈಗ ಅಳವಡಿಸಿರುವ ದಾರಿದೀಪಗಳನ್ನು ದುರಸ್ತಿ ಮಾಡಲಾಗುತ್ತಿದೆ. ಅನುದಾನ ಕೊರತೆ ಇರುವುದರಿಂದ ಟೆಂಡರ್ ಕರೆದಿಲ್ಲ ಎಂದರು.
ಮಡಿ-ಬೆಣ್ಗೇರೆ ಎಂಬಲ್ಲಿ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಟ್ಯಾಂಕರ್ ಮೂಲಕ ಮಡಿ-ಬೆಣ್ಗೆರೆ ಪ್ರದೇಶಕ್ಕೆ ಮಾತ್ರ ನೀರು ಸರಬರಾಜು ಮಾಡುತ್ತಿಲ್ಲ. ಜನರು ನೀರಿಗೋಸ್ಕರ 2 ಕಿ.ಮೀ. ದೂರ ನಡೆದುಕೊಂಡು ಹೋಗಬೇಕಿದೆ ಎಂದು ದೇವದಾಸ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಸ್ಥಳೀಯ ಮಹಿಳೆಯರು ಬಾಟಲಿಯಲ್ಲಿ ತಂದ ಕಲುಷಿತ ನೀರಿನ್ನು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಡಿ-ಬೆಣ್ಗೇರೆ ಪ್ರದೇಶಕ್ಕೆ ಹೊಸ ಪೈಪ್ಲೈನ್ ಮಾಡಲಾಗಿದ್ದರೂ ನೀರು ಹೋಗುತ್ತಿಲ್ಲ. ಪಂಚಾಯತ್ ರಾಜ್ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಟಾಸ್ಕ್ಫೋರ್ಸ್ ಮೂಲಕ ಅನುದಾನ ಕೇಳಲಾಗುವುದು ಎಂದು ಪಿಡಿಒ ತಿಳಿಸಿದರು.
ಗುಜ್ಜಾಡಿ ಗ್ರಾಪಂ ಆಡಳಿತಾಧಿಕಾರಿ ಸಂಜೀವ ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ತಾಪಂ ಇಒ ನಾಗಶಯನ ನೋಡಲ್ ಅಧಿಕಾರಿಯಾಗಿದ್ದರು. ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ, ಮೆಸ್ಕಾಂ ಗಂಗೊಳ್ಳಿ ಶಾಖೆಯ ಜೆಇ ದಿನೇಶ ಶೆಟ್ಟಿ, ಗುಜ್ಜಾಡಿ ಪಶು ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ., ಗಂಗೊಳ್ಳಿ ಪೊಲೀಸ್ ಠಾಣೆಯ ಎಎಸ್ಸೈ ನವೀನ್, ಗಂಗೊಳ್ಳಿ ವಲಯ ಅಂಗನವಾಡಿ ಮೇಲ್ವಿಚಾರಕಿ ರೇಖಾ ಕೆ., ಆರೋಗ್ಯ ಇಲಾಖೆಯ ಹುಲಿಯಪ್ಪ ಗೌಡ, ಗ್ರಾಮ ಆಡಳಿತ ಅಧಿಕಾರಿ ಸೋಮಪ್ಪ, ಕೆಸಿಡಿಸಿ ಅಧಿಕಾರಿ ಗಣಪತಿ ಭಟ್, ಕಾರ್ಯದರ್ಶಿ ಶಕುಂತಲಾ ಮೊದಲಾದವರು ಉಪಸ್ಥಿತರಿದ್ದರು.
ಅನುದಾನದ ಕೊರತೆ ಬಗ್ಗೆ ಸಾರ್ವಜನಿಕರು ವಿಷಯ ಪ್ರಸ್ತಾಪಿಸಿದಾಗ, 15ನೇ ಮತ್ತು 16ನೇ ಹಣಕಾಸು ಅನುದಾನ ಬಾರದಿರುವುದರಿಂದ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. ವರ್ಗ 1ರ ಅನುದಾನ ಪಂಚಾಯಿತಿ ನಿರ್ವಹಣೆಗೆ ಸಾಕಾಗುತ್ತಿಲ್ಲ. ಮೆಸ್ಕಾಂಗೆ5 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇದೆ ಎಂದು ಪಿಡಿಒ ಶೋಭಾ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿರುವುದರ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಮುಂದಿನ ಸಭೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸಭೆಯ ನೋಡಲ್ ಅಧಿಕಾರಿ ಸಭೆಯ ಮಧ್ಯದಲ್ಲೇ ನಿರ್ಗಮಿಸಿರುವುದು ಗ್ರಾಮಸ್ಥರನ್ನು ಕೆರಳಿಸಿತು. ಸಭೆಗೆ ತಿಳಿಸದೆ ಏಕಾಏಕಿ ಸಭೆಯಿಂದ ನಿರ್ಗಮಿಸಿರುವುದು ಸರಿಯಲ್ಲ. ಕಾಟಾಚಾರಕ್ಕೆ ಸಭೆ ನಡೆಸಬಾರದು ಎಂಬ ಆಗ್ರಹ ಕೇಳಿಬಂತು.