ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣೆ ನಿಮಿತ್ತ ಉಡುಪಿಯ ಗೀತಾಮಂದಿರದಲ್ಲಿ 'ಶ್ರೀಪುತ್ತಿಗೆ ಸುಗುಣ ಶಿಬಿರ' ಆಯೋಜನೆ. 
ಉಡುಪಿ

ಶ್ರೀಪುತ್ತಿಗೆ 'ಸುಗುಣ' ಶಿಬಿರ ಏ.20ರಿಂದ ಪ್ರಾರಂಭ

* ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣೆ ನಿಮಿತ್ತ

* ಏ.19ರಂದು ಶೀರೂರು ಶ್ರೀಗಳಿಂದ ಉದ್ಘಾಟನೆ

ಉಡುಪಿ: ಶ್ರೀಮನ್​ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀ ಪುತ್ತಿಗೆ ಮಠದ ಯತಿಕುಲ ಚಕ್ರವರ್ತಿ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಪಟ್ಟದ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಉಡುಪಿಯ ಗೀತಾಮಂದಿರದಲ್ಲಿ ಪ್ರಥಮ ಬಾರಿಗೆ 'ಶ್ರೀಪುತ್ತಿಗೆ ಸುಗುಣ ಶಿಬಿರ' ಆಯೋಜಿಸಲಾಗಿದೆ. 
ಭಾರತೀಯ ಸಂತ ಮಹಾಪರಿಷತ್​, ವಿಶ್ವ ಹಿಂದೂ ಪರಿಷತ್​, ಸಂಸ್ಕಾರ ಭಾರತೀ, ಕುಟುಂಬ ಪ್ರಬೋಧನ ಸಮಿತಿ ಮತ್ತು ಪತಂಜಲಿ ಯೋಗ ಸಮಿತಿ ಉಡುಪಿ ಘಟಕಗಳ ಸಹಭಾಗಿತ್ವದಲ್ಲಿ ಶಿಬಿರ ನಡೆಯಲಿದೆ. ಏ.20ರಿಂದ ಏ.30ರ ವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 5:30ರ ವರೆಗೆ ಶಿಬಿರ ನಡೆಯಲಿದೆ.
ಏ.19ರಂದು ಅಪರಾಹ್ನ 3 ಗಂಟೆಗೆ ಪರ್ಯಾಯ ಶೀರೂರು ಶ್ರೀಕೃಷ್ಣ ಮಠದ ವೇದವರ್ಧನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶಪಾಲ್​ ಸುವರ್ಣ, ಖ್ಯಾತ ಚಿತ್ರನಟ, ನಿರ್ದೇಶಕ ರಿಷಭ್​ ಶೆಟ್ಟಿ, ಕಾಪು ಹೊಸ ಮಾರಿಗುಡಿಯ ವಾಸುದೇವ ಶೆಟ್ಟಿ, ಮಂಗಳೂರು ಶ್ರೀನಿವಾಸ ಯುನಿವರ್ಸಿಟಿಯ ಕುಲಾಧಿಪತಿ ಡಾ.ಶ್ರೀನಿವಾಸ ರಾವ್​ ಪಾಲ್ಗೊಳ್ಳಲಿದ್ದಾರೆ.

ಐದು ವಿಭಾಗದಲ್ಲಿ ಶಿಬಿರ 

ಸನಾತನ ಹಿಂದೂ ಸಂಸ್ಕೃತಿ ಸಂರಕ್ಷಣೆ ನಿಮಿತ್ತ ಶಿಬಿರ ಆಯೋಜಿಸಿದ್ದು 5 ವರ್ಷದಿಂದ 60 ವರ್ಷ ಮೇಲ್ಪಟ್ಟವರಿಗೂ ಅವಕಾಶವಿದೆ. ಐದು ವಿಭಾಗಗಳಲ್ಲಿ ತರಗತಿ ನಡೆಸಲಾಗುತ್ತದೆ. ಸರಳ ನಿತ್ಯ-ವಿಧಿಗಳು, ಹಿಂದೂ ಆಚಾರ&ವಿಚಾರಗಳು, ಹಾಡು, ಭಜನೆ, ಕಲೆ, ಹೂ ಕಟ್ಟುವುದು, ರಂಗವಲ್ಲಿ, ವಿವಿಧ ಆಟಗಳು, ಕರ-ಕುಶಲ, ಹಬ್ಬ-ಹರಿದಿನಗಳ ಮಾಹಿತಿ, ಉಪನ್ಯಾಸ ಹಾಗೂ ಸಾಧಕ-ಸಂವಾದ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. 
ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವಾಂಸರಾದ ವೇದವ್ಯಾಸ ಪುರಾಣಿಕ, ಡಾ.ಸುನೀಲ್​ ಆಚಾರ್ಯ, ಕೆ.ವಿ. ರಮಣ ಆಚಾರ್ಯ, ವಿಕ್ರಂ ಕುಂಟಾರ್​, ಸಮರ್ಥ ಜೋಷಿ, ರಾಘವೇಂದ್ರ ಆಚಾರ್ಯ, ರಾಘವೇಂದ್ರ ಭಟ್​, ವಿದುಷಿ ಉಷಾ ಹೆಬ್ಬಾರ್​, ಸರಸ್ವತಮ್ಮ, ಸರೋಜಕ್ಕ, ಸುಮಿತ್ರಾ ಕೆರೆಮಠ ಇತರರು ಪಾಲ್ಗೊಳ್ಳಲಿದ್ದಾರೆ.
ಏ.30ರಂದು ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲಮಠದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮಾಹಿತಿ ಹಾಗೂ ನೋಂದಣಿಗಾಗಿ ಶಿಬಿರ ಸಂಚಾಲಕರಾದ ರಮೇಶ್​ ಭಟ್​ ( 9880835626), ಕೆ.ವಿ. ರಮಣ ಆಚಾರ್ಯ (8792158946), ಕಿರಣ್​ ಭಟ್​ (9663891702) ಇವರನ್ನು ಸಂಪರ್ಕಿಸಬಹುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಹಬ್ಬಗಳ ಆಚರಣೆ ಕುರಿತು ವಿದ್ವಾಂಸರಿಂದ ಪ್ರವಚನ

ಶಿಬಿರದಲ್ಲಿ ಹಬ್ಬ ಹರಿದಿನಗಳು ಎನ್ನುವ ವಿಚಾರದಲ್ಲಿ ಯುಗಾದಿ, ನಾಗರ ಪಂಚಮಿ, ಚೌತಿ, ಶ್ರೀ ಕೃಫ್ಣಿ ಜನ್ಮಾಷ್ಟಮಿ, ನವರಾತ್ರಿ, ನರಸಿಂಹ ಜಯಂತಿ, ತುಳಸೀ ಪೂಜೆ, ದೀಪಾವಳಿ, ಗೋಪೂಜೆ ಸಹಿತ ಕಾರ್ತಿಕ ಮಾಸ, ಗೀತಾ ಜಯಂತಿ, ಏಕಾದಶಿ ಮುಂತಾದ ಪರ್ವ ದಿನಗಳ ಕುರಿತಂತೆ ವಿದ್ವಾಂಸರಿಂದ ಪ್ರವಚನ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ 5ರ ವರೆಗೆ ಮಹಾ ಮಹೋಪಾಧ್ಯಾಯ, ಶತಾವಧಾನಿ ಡಾ. ಉಡುಪಿ ರಾಮನಾಥ ಆಚಾರ್ಯ, ಸಗ್ರಿ ಆನಂದ ತೀರ್ಥ ಉಪಾಧ್ಯಾಯ, ಷಣ್ಮುಖ ಹೆಬ್ಬಾರ್​, ಡಾ. ಸುನೀಲ್​ ಆಚಾರ್ಯ, ಸುಧೀಂದ್ರ ಆಚಾರ್ಯ ಇತರರ ಹಬ್ಬಗಳ ಆಚರಣೆ ಹಾಗೂ ವಿಧಿ-ವಿಧಾನಗಳ ಬಗ್ಗೆ ತಿಳಿಸಲಿದ್ದಾರೆ.'ಸಾಧಕ-ಸಂವಾದ' ಎಂಬ ಇನ್ನೊಂದು ಅವಧಿ ಸಂಜೆ 5ರಿಂದ 5:45ರ ವರೆಗೆ ನಡೆಯಲಿದೆ. ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಪ್ರಶ್ನೋತ್ತರ ಹಮ್ಮಿಕೊಳ್ಳಲಾಗಿದೆ. ಡಾ. ಶ್ರುತಿ ಬಲ್ಲಾಳ್​, ಡಾ. ಎಂ.ಮೋಹನ ಆಳ್ವ, ಡಾ. ರಾಮಕೃಷ್ಣ ಆಚಾರ್​, ಡಾ.ಬಿ. ಗೋಪಾಲ್​ ಆಚಾರ್ಯ, ಡಾ ವಿಜಯೇಂದ್ರ ವಸಂತ್​, ಡಾ. ಸುಧೀರ್​ ರಾಜ್​, ವಾದಿರಾಜ,  ರತ್ನಾಕರ್​ ಇಂದ್ರಾಳಿ ಇತರರು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.