ಉಡುಪಿಯಲ್ಲಿ ರಾಗ ಧನ ಸಂಸ್ಥೆ ಆಯೋಜಿಸಿದ್ದ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವವನ್ನು ಪ್ರೊ.ರಾಮಮೂರ್ತಿ ರಾವ್ ಉದ್ಘಾಟಿಸಿದರು. ಪೂರ್ಣಿಮಾ, ಶ್ರೀಕಿರಣ್ ಹೆಬ್ಬಾರ್, ಪ್ರೊ.ವನಿತಾ ಮಯ್ಯ, ಪರ್ಲತ್ತಾಯ ಡಾ. ಸುದರ್ಶನ್ ಭಾರತೀಯ, ಡಾ. ಅನೀಶ್ ಭಟ್, ಉಮಾಶಂಕರಿ ಟಿ.ಕೆ. ಉಪಸ್ಥಿತರಿದ್ದರು.
* ಪ್ರೊ.ರಾಮಮೂರ್ತಿ ರಾವ್ ಮೈಸೂರು ವಿಷಾದ
* ಶ್ರೀ ಪುರಂದರದಾಸ, ತ್ರಿಮೂರ್ತಿ ಉತ್ಸವ ಉದ್ಘಾಟನೆ
ಉಡುಪಿ: ಕರ್ನಾಟಕದ ಸಂಗೀತದ ಕ್ಷೇತ್ರಕ್ಕೆ ಶಾಮಾ ಶಾಸ್ತ್ರಿ, ತ್ಯಾಗರಾಜರು ಹಾಗೂ ಮುತ್ತುಸ್ವಾಮಿ ದೀಕ್ಷಿತ ಅವರು ನೀಡಿದ ಕೊಡುಗೆ ಸಾರ್ವಕಾಲಿಕ. ತಂಜಾವೂರಿನ ತಿರುವಾಂಕನೂರಿನಲ್ಲಿ ಜನಿಸಿದ, ಸಮಕಾಲೀನರಾದ ಈ ಮೂವರೂ ಸ್ನೇಹಿತರು ಎಷ್ಟೇ ಶತಮಾನ ಕಳೆದರೂ ಕರ್ನಾಟಕ ಸಂಗೀತ ಕ್ಷೇತ್ರದ ಹೊಳಪು ಮಾಸದಂತೆ ಗಟ್ಟಿಯಾದ ಛಾಪು ಮೂಡಿಸಿದ್ದಾರೆ. ಜ್ಞಾನ, ಭಕ್ತಿ, ವೈರಾಗ್ಯದ ಪ್ರತಿಭೆಯಿಂದ ಹಲವು ನೂತನ ರಾಗ ಕಂಡು ಹಿಡಿದು ಸಂಗೀತ ಲೋಕಕ್ಕೆ ನೀಡಿದ್ದಾರೆ. ಪುರಂದರ ದಾಸರಂತೂ ಕರ್ನಾಟಕ ಸಂಗೀತದ ಪಿತಾಮಹರಾಗಿದ್ದಾರೆ. ಆದರೆ, ಇಂತಹ ಮಹತ್ವದ ಉತ್ಸವದಲ್ಲಿ ಯುವಜನರು ನಿರಾಸಕ್ತರಾಗುತ್ತಿರುವುದು ಖೇದಕರ ಎಂದು ನಾಟ್ಯಾಚಾರ್ಯ ಮೈಸೂರಿನ ಪ್ರೊ.ರಾಮಮೂರ್ತಿ ರಾವ್ ವಿಷಾದ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗ ಧನ ಸಂಸ್ಥೆ ಉಡುಪಿ ಆಶ್ರಯದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ (ಫೆ.6) ಸಂಜೆ ಆಯೋಜಿಸಿದ್ದ ಮೂರು ದಿನಗಳ 38ನೇ ಶ್ರೀ ಪುರಂದರದಾಸರು ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಅದಾನಿ ಸಂಸ್ಥೆಯ ನಿರ್ದೇಶಕ ಕಿಶೋರ್ ಆಳ್ವ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವನಿತಾ ಮಯ್ಯ, ಪರ್ಲತ್ತಾಯ ಡಾ. ಸುದರ್ಶನ್ ಭಾರತೀಯ, ಡಾ. ಅನೀಶ್ ಭಟ್ ಉಪಸ್ಥಿತರಿದ್ದರು. ರಾಗ ಧನ ಉಡುಪಿ ಅಧ್ಯಕ್ಷ ಡಾ. ಶ್ರೀಕಿರಣ್ ಹೆಬ್ಬಾರ್ ಆರೂರು ಅಧ್ಯಕ್ಷತೆ ವಹಿಸಿದ್ದರು.
ಸಾಧಕಿ ದೀಕ್ಷಾಗೆ ಸನ್ಮಾನ
ಇತ್ತೀಚೆಗೆ 'ಪುರಂದರ ಗಾನ ನರ್ತನ' ಎಂಬ ಶೀರ್ಷಿಕೆಯಡಿ ಸತತ 6 ಗಂಟೆ 13 ನಿಮಿಷಗಳ ಕಾಲ ಪುರಂದರ ದಾಸರ ಹಾಡುಗಳನ್ನು ಹೇಳುತ್ತ ನೃತ್ಯ ಪ್ರದರ್ಶಿಸಿ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್' ದಾಖಲೆ ಮಾಡಿದ್ದ ದೀಕ್ಷಾ ರಾಮಕೃಷ್ಣ ಅವರನ್ನು ರಾಗ ಧನ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜ್ಯೋತಿ ಶೈಲೇಂದ್ರ ಸನ್ಮಾನ ಪತ್ರ ವಾಚಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಮಂಗಳೂರಿನ 'ಆರೋಹಣಂ' ಸಂಗೀತ ಶಾಲೆಯ ಡಾ. ಅನೀಶ್ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ ನಡೆಯಿತು. ವಯೊಲಿನ್ನಲ್ಲಿ ಧನಶ್ರೀ ಶಬರಾಯ, ಮೃದಂಗದಲ್ಲಿ ಡಾ.ಬಾಲಚಂದ್ರ ಆಚಾರ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಚೆನ್ನೈನ ಖ್ಯಾತ ಸಂಗೀತಗಾರ ಸಾಯಿ ವಿಘ್ನೇಶ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ವಯೊಲಿನ್ನಲ್ಲಿ ಮಹತಿ ಕೆ. ಕಾರ್ಕಳ, ಮೃದಂಗದಲ್ಲಿ ಕೃಷ್ಣ ಪವನ್ ಕುಮಾರ್ ಮಂಗಳೂರು, ಮೋರ್ಸಿಂಗ್ನಲ್ಲಿ ಬಾಲಕೃಷ್ಣ ಹೊಸಮನೆ ಸಹಕರಿಸಿದರು.
ಸ್ವಸ್ತಿ ಎಂ. ಭಟ್ ಪ್ರಾರ್ಥಿಸಿದರು. ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾಶಂಕರಿ ಟಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಸ್ಥೆಯ ಖಜಾಂಚಿ ಪ್ರೊ. ಕೆ.ಸದಾಶಿವ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಯುವಪೀಳಿಗೆಗೆ ಸಂಗೀತ, ನೃತ್ಯ ಇನ್ನಿತರ ಕಲೆಗಳಲ್ಲಿ ತೊಡಗಿಸಿಕೊಳ್ಳಲು ತಿಳಿಹೇಳಬೇಕು. ಅವರಿಗೆ ಪ್ರೇರಣೆ ನೀಡಬೇಕು. ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಪಾಲಕರು ಕರೆದುಕೊಂಡು ಬರುವಂತಾಗಬೇಕು. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಮಕ್ಕಳು ಮೊಬೈಲ್ ಗೀಳಿನಿಂದ ಹೊರಬರಲು ಸಾಧ್ಯವಾಗುತ್ತದೆ.