ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು 
ಉಡುಪಿ

ಸೆ.4ರಂದು ಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಗೋಪಾಲಕೃಷ್ಣ ಪಾದೂರ್
ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶಿರೂರು ಮಠದ ಆಶ್ರಯದಲ್ಲಿ ಸೆ. 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಸೆ. 5ರಂದು ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆಯಲಿದೆ ಎಂದು ಪರ್ಯಾಯ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ತಿಳಿಸಿದರು.

ಶೀರೂರು ಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 4ರಂದು ರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅ್ಯರ್ ಪ್ರದಾನ ನಡೆಯಲಿದೆ. ಸೆ. 5ರಂದು ಬೆಳಗ್ಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಶ್ರೀಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ ನಡೆಯಲಿದೆ ಎಂದರು.

2 ದಿನ ಹುಲಿವೇಷ ಸ್ಪರ್ಧೆ
ದಿವಾನ್​ ಡಾ. ಉದಯ್​ ಸರಳತ್ತಾಯ ಮಾತನಾಡಿ, ವಿಟ್ಲಪಿಂಡಿ ಉತ್ಸವದ ಅಂಗವಾಗಿ ರಾಜಾಂಗಣದಲ್ಲಿ ಸೆ.4ರಂದು 9 ರಿಂದ ಸಂಜೆ 5 ರವರೆಗೆ ಹಾಗೂ ಸೆ. 5ರಂದು ಸಂಜೆ 5ರಿಂದ ಹುಲಿ ವೇಷ ಹಾಗೂ ಜಾನಪದ ನೃತ್ಯ ಸ್ಪರ್ಧೆ ಹುಲಿವೇಷ ಸ್ಪರ್ಧೆ ನಡೆಯಲಿದೆ. ವಿಜೇತ ತಂಡಕ್ಕೆ 1 ಲಕ್ಷ ರೂ. ಬಹುಮಾನ ನೀಡಲಾಗುವುದು. ಸೆ. 6ರಂದು ಬೆಳಗ್ಗೆ ಕೋಟಿ ತುಳಸಿ ಅರ್ಚನೆ, ಸಾಯಂಕಾಲ 5 ಗಂಟೆಗೆ ರಾಜಾಂಗಣದಲ್ಲಿ ಅಷ್ಟಮಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಮಲ್ಲಯುದ್ಧ ಪ್ರದರ್ಶನ
ಈ ಬಾರಿ ವಿಶೇಷವಾಗಿ ಸೆ.5ರಂದು ಮಧ್ಯಾಹ್ನ ರಥಬೀದಿಯ ವಿಶೇಷ ವೇದಿಕೆಯಲ್ಲಿ ಮಂಡ್ಯ, ಮಂಗಳೂರು, ಮೈಸೂರಿನ ಆಹ್ವಾನಿತ ಮಲ್ಲಯುದ್ಧ ಪ್ರವಿಣರಿಂದ ಸಂಪ್ರದಾಯ ಬದ್ಧವಾಗಿ ಮಲ್ಲಯುದ್ಧ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಅಭಿವೃದ್ಧಿ ಕಾಮಗಾರಿಗಳಿಗೆ 4 ಕೋಟಿ ರೂ. ವೆಚ್ಚ
ಕೃಷ್ಣ ಮಠದಲ್ಲಿ ಪರ್ಯಾಯ ಶೀರೂರು ಮಠದಿಂದ ಭಕ್ತಾದಿಗಳ ಅನುಕೂಲಕ್ಕಾಗಿ ಹಾಗೂ ಮೂಲಸೌಕರ್ಯಗಳ ಆಧುನೀಕರಣಕ್ಕಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜನವರಿಂದ ಈವರೆಗೆ ಒಟ್ಟು 4 ಕೋಟಿ ರೂ. ಅಧಿಕ ವೆಚ್ಚ ಮಾಡಲಾಗಿದೆ ಎಂದು ಉದಯ್​ ಕುಮಾರ್​ ತಿಳಿಸಿದರು.

ಭಕ್ತಾದಿಗಳಿಗೆ ಸುಗಮ ದರ್ಶನಕ್ಕಾಗಿ 50.40 ಲಕ್ಷ ರೂ. ವೆಚ್ಚದಲ್ಲಿ ಹೊಸ ಕ್ಯೂ ವ್ಯವಸ್ಥೆ ರೂಪಿಸಲಾಗಿದೆ. ಬ್ರಹ್ಮರಥಕ್ಕೆ 15 ಲಕ್ಷ ರೂ. ವೆಚ್ಚದಲ್ಲಿ ಹೊಸ ಚಕ್ರಗಳನ್ನು ಅಳವಡಿಸಲಾಗಿದೆ. 75.42 ಲಕ್ಷ ರೂ. ವೆಚ್ಚದಲ್ಲಿ ನೂತನ ಶೌಚಾಲಯ ಹಾಗೂ ಸ್ನಾನಗೃಹಗಳನ್ನು ನಿರ್ಮಿಸಲಾಗಿದೆ. ಪರಿಸರ ಸ್ನೇಹಿ ಇಂಧನಕ್ಕಾಗಿ 65 ಲಕ್ಷ ರೂ. ವೆಚ್ಚದಲ್ಲಿ ಬಯೋ ಗ್ಯಾಸ್​ ಘಟಕ ಸ್ಥಾಪಿಸಲಾಗಿದೆ. ಮಠದ ಸುರಕ್ಷತೆಯನ್ನು ಹೆಚ್ಚಿಸಲು 20.30 ಲಕ್ಷ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಗೂ 24.74 ಲಕ್ಷ ರೂ. ವೆಚ್ಚದಲ್ಲಿ ನೂತನ ವೈರಿಂಗ್​ ವ್ಯವಸ್ಥೆ ಮಾಡಲಾಗಿದೆ. ಅನ್ನದಾನ ಸೇವೆಯನ್ನು ಸುಗಮಗೊಳಿಸಲು ಚಪಾತಿ ಯಂತ್ರ, ಕಟಿಂಗ್​ ಯಂತ್ರ, ಕಡ್ಲೆ ಬೀಸುವ ಯಂತ್ರ ಹಾಗೂ ಆಧುನಿಕ ಬಾಯ್ಲರ್​ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮ್ಯಾನೇಜರ್​ ವಾಸುದೇವ ಆಚಾರ್ಯ, ಶ್ರೀಗಳ ಕಾರ್ಯದರ್ಶಿ ರಾಮಮೂರ್ತಿ ಭಟ್​, ಕಾರ್ತಿಕ್​ ಭಟ್​ ಮೊದಲಾದವರು ಉಪಸ್ಥಿತರಿದ್ದರು.