ಉಡುಪಿ: ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪದವೀಧರರು ಹೊರಬರುತ್ತಿರುವುದು ಸಂತಸದ ಸಂಗತಿ. ತಮ್ಮ ವೃತ್ತಿಪರ ಜವಾಬ್ದಾರಿಗಳಿಂದ ಎಂದೂ ಹಿಂದೆ ಸರಿಯದೆ ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ದೇಶದ ಪ್ರತಿಷ್ಠಿತ ಆಯುರ್ವೇದ ಶಿಕ್ಷಣ ಸಂಸ್ಥೆಯಾದ ಎಸ್ಡಿಎಂ ಕಾಲೇಜ್ನಲ್ಲಿ ಪದವಿ ಗಳಿಸಿರುವ ತಾವುಗಳು ವಿಶ್ವಾದ್ಯಂತ ಆಯುರ್ವೇದದ ಪರಂಪರೆ ಪಸರಿಸಬೇಕು ಎಂದು ಭಾರತೀಯ ವೈದ್ಯಕೀಯ ಪದ್ಧತಿಯ ನೈತಿಕತೆ ಮತ್ತು ನೋಂದಣಿ ಮಂಡಳಿ, ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪದ್ಧತಿ ಆಯೋಗದ ಅಧ್ಯಕ್ಷ ಡಾ. ಸುಶ್ರುತ ಕನೌಜಿಯಾ ಸಲಹೆ ನೀಡಿದರು.
ಉಡುಪಿ ಕುತ್ಪಾಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜ್, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಭಾವಪ್ರಕಾಶ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 2026ನೇ ಸಾಲಿನ 'ವಿಶಿಖಾನುಪ್ರವೇಶ' ಪದವಿ ಪ್ರದಾನ ಸಮಾರಂಭದಲ್ಲಿ ಭಾಷಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ ಮಾತನಾಡಿ, ಆಯುರ್ವೇದ ಕಾಲೇಜ್ ಸ್ಥಾಪನೆಯು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಕನಸಿನ ಯೋಜನೆಯಾಗಿದೆ ಎಂದರು.
ಕಾಲೇಜ್ನ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ. ಸ್ವಾಗತಿಸಿ, ಪದವಿ ಗಳಿಸಿದ ಎಲ್ಲ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಿ, ಆಯುರ್ವೇದ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಪದವಿ ಪ್ರದಾನ
ಡಾ. ಸುಶ್ರುತ ಕನೌಜಿಯಾ ಅವರು ಸ್ನಾತಕ ಪದವೀಧರರಿಗೆ ಪದವಿ ಪ್ರಮಾಣಪತ್ರ ವಿತರಿಸಿದರು. ಡಿ. ಸುರೇಂದ್ರಕುಮಾರ ಅವರು ಸ್ನಾತಕೋತ್ತರ ಪದವೀಧರರಿಗೆ ಪದವಿ ಹಾಗೂ ರ್ಯಾಂಕ್ ಪ್ರಮಾಣಪತ್ರ ಪ್ರದಾನ ಮಾಡಿದರು. ಡಾ. ಪ್ರಶಾಂತ್ ಕೆ., ಪದವೀಧರರಿಗೆ ವೈದ್ಯಕೀಯ ವೃತ್ತಿಯ ಪ್ರಮಾಣವಚನ ಬೋಧಿಸಿದರು.
ಸಮಾರಂಭದಲ್ಲಿ ಕಾಲೇಜ್ನ ವೈದ್ಯಕೀಯ ಅಧೀಕ್ಷಕ ಡಾ. ಜಯಕೃಷ್ಣ ನಾಯಕ, ಸ್ನಾತಕ ವಿಭಾಗದ ಡೀನ್ ಡಾ. ಪೃಥ್ವಿರಾಜ ಪುರಾಣಿಕ, ಡೀನ್ (ಆಡಳಿತ) ಡಾ. ಪ್ರಶಾಂತ ಕೆ. ಉಪಸ್ಥಿತರಿದ್ದರು.
ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿಭಾಗದ ಡೀನ್ ಡಾ. ಶ್ರೀಕಾಂತ ಪಿ. ವಂದಿಸಿದರು. ಡಾ. ಶುಭಾ ಪಿ.ಯು. ಮತ್ತು ಡಾ. ಮೇಘನಾ ಕೆ.ಎ. ಕಾರ್ಯಕ್ರಮ ನಿರೂಪಿಸಿದರು.